


ಡೈಲಿ ವಾರ್ತೆ: 02/ಆಗಸ್ಟ್/ 2025


ಕಾರವಾರ| ನಂದನಗದ್ದಾದಲ್ಲಿ ಮನೆ ಬೆಂಕಿಗಾಹುತಿ – ಲಕ್ಷಾಂತರ ರೂ. ನಷ್ಟ

ಕಾರವಾರ: ನಗರದ ನಂದನಗದ್ದ ಪಾರ್ವತಿ ಶಂಕರ್ ಕಲ್ಯಾಣ ಮಂಟಪದ ಬಳಿ ಇರುವ ಬಾಳಾ ನಾಯ್ಕ( ಶಾಂತಾರಾಮ ದತ್ತ ದೇಸಾಯಿ) ಎಂಬುವರ ಹಂಚಿನ ಮನೆಗೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆದಿದೆ.
ಮನೆಯ ಮಾಲಕ ರಾತ್ರಿ ದೇವರಿಗೆ ದೀಪ ಹಚ್ಚಿ, ಮನೆಗೆ ಬೀಗ ಹಾಕಿ ಮಾರುಕಟ್ಟೆಗೆ ಹೋಗಿದ್ದರು. ಅವರು ಹಿಂತಿರುಗಿ ಬರುವ ಹೊತ್ತಿಗೆ ಮನೆಗೆ ಬೆಂಕಿ ತಗುಲಿರುವುದು ಕಂಡು ಗಾಬರಿಗೊಂಡರು. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರಿಂದ ಬೆಂಕಿ ನಂದಿಸಲು ಎರಡು ಟ್ಯಾಂಕರ್ ನೀರನ್ನು ಬಳಸಬೇಕಾಯಿತು.
ದೇವರಿಗೆ ಹಚ್ಚಿದ ದೀಪವನ್ನು ಇಲಿಯೊಂದು ಎಳೆದೊಯ್ದಿದ್ದರಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂದು ಮನೆಯವರು ಊಹಿಸಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಮನೆಯು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.