ಡೈಲಿ ವಾರ್ತೆ: 03/ಆಗಸ್ಟ್/ 2025

ವಿಟ್ಲ| ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ – 2 ಲಾರಿ ವಶಕ್ಕೆ

ಬಂಟ್ವಾಳ: ಕೇರಳದಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿಂದ ವಿಟ್ಲ ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ವಿಟ್ಲ ಪೊಲೀಸ್ ಠಾಣಾಧಿಕಾರಿ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಶನಿವಾರ ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಇದೇ ಮಾರ್ಗವಾಗಿ, ಉಕ್ಕಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಎರಡು ಲಾರಿಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮ ಕೆಂಪು ಕಲ್ಲು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.

ಎರಡು ಲಾರಿಗಳಲ್ಲಿ ತಲಾ 500 ಕೆಂಪು ಕಲ್ಲುಗಳಿದ್ದು, ಕೆಂಪು ಕಲ್ಲು ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇರಲಿಲ್ಲ. ಒಂದು ಲಾರಿಗೆ ಕೇರಳ ರಾಜ್ಯದ ಪೆರ್ಲ ಎಂಬಲ್ಲಿಂದ ಕಲ್ಲುಗಳನ್ನು ಜಾಫರ್ ಎಂಬವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿಯೂ ಇನ್ನೊಂದು ಲಾರಿಗೆ ಕೇರಳ ರಾಜ್ಯದ ಧರ್ಮತ್ತಡ್ಕ ಎಂಬಲ್ಲಿಂದ ನಾಸೀರ್ ಎಂಬವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ ತಪಾಸಣೆ ವೇಳೆ ಚಾಲಕರು ತಿಳಿಸಿದ್ದಾರೆ ಎನ್ನಲಾಗಿದೆ.

ಸದ್ರಿ ಲಾರಿಗಳನ್ನು ಹಾಗೂ ಚಾಲಕರುಗಳನ್ನು ವಶಕ್ಕೆ ಪಡೆದು, ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಕಳ್ಳತನದಿಂದ ತುಂಬಿಸಿಕೊಂಡು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.