ಡೈಲಿ ವಾರ್ತೆ: 04/ಆಗಸ್ಟ್/ 2025

ಧರ್ಮಸ್ಥಳ ಪ್ರಕರಣ: ಅನಾಮಿಕ ತೋರಿಸಿದ್ದ ಅಚ್ಚರಿಯ ಜಾಗದಲ್ಲಿ ಅಸ್ಥಿಪಂಜರ ಪತ್ತೆ – ಕಾಡಿನೊಳಗೆ ಉಪ್ಪು ಕೊಂಡೊಯ್ದ ಕಾರ್ಮಿಕರು!

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅನುಮಾನಾಸ್ಪದ ಬೆಳವಣಿಗೆ ನಡೆದಿದೆ.

ಹನ್ನೊಂದನೇ ಸ್ಥಳದಲ್ಲಿ ಕಳೇಬರ ಶೋಧ ಕಾರ್ಯಾಚರಣೆ ಆಗಬೇಕಿದ್ದ ಕಾರ್ಯವನ್ನು ಅಲ್ಲೇ ಮೊಟಕುಗೊಳಿಸಿ ಎಸ್‌ಐಟಿ ತಂಡ ಅನಾಮಿಕ ವ್ಯಕ್ತಿ ಗುರುತಿಸಿದ ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸುತ್ತಿದ್ದು ಹಲವಾರು ಅಸ್ಥಿಪಂಜರದ ಭಾಗಗಳು ಪತ್ತೆಯಾಗಿದೆ.

ಊಟದ ಬ್ರೇಕ್ ಕೂಡಾ ಕೊಡದೆ ಉತ್ಖನನ ಕಾರ್ಯ ನಡೆಯುತ್ತಿದೆ. ಇದೀಗ ಸ್ಥಳಕ್ಕೆ ಎಸ್‌ಐಟಿ ತಂಡ ಎರಡು ಮೂಟೆ ಉಪ್ಪನ್ನೂ ಜೊತೆಗೆ ಹೊತ್ತೊಯ್ದಿದೆ. ಅಲ್ಲಿ ಕಳೇಬರ ಹಾಗೂ ಸೀರೆಯ ತುಣುಕುಗಳು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅನಾಮಿಕ ಹನ್ನೊಂದನೇ ಸ್ಥಳದ ನೂರು ಮೀಟ‌ರ್ ಅಂತರದಲ್ಲಿದ್ದ ಗುಡ್ಡವನ್ನು ಏರುವಂತೆ ತಿಳಿಸಿದ್ದು ಅದನ್ನು ಏರುವಷ್ಟರಲ್ಲಿ ಕೆಲವರು ಜಾರಿ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಗೆತದ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಸಿಕ್ಕಿರುವ ಅವಶೇಷಗಳನ್ನು ಸಂರಕ್ಷಿಸುವ ಉಮೇದಿನಲ್ಲಿ ಅಧಿಕಾರಿಗಳು ಇದ್ದಾರೆ. ಎಲ್ಲಾ ಪಾಯಿಂಟ್ ಗಳನ್ನು ಎಫ್.ಎಸ್.ಎಲ್ ಗೆ ಕಳುಹಿಸಬೇಕಾಗಿದೆ. ಮಹಜರು ಕಾರ್ಯ ಕೂಡಾ ಆಗಬೇಕಿದೆ. ಆದ್ದರಿಂದ ಸಂಜೆಯ ಬಳಿಕ ಕಾಡಿನಲ್ಲಿ ದಟ್ಟ ಕತ್ತಲು ಆವರಿಸುವುದರಿಂದ ಶೀಘ್ರವಾಗಿ ಕೆಲಸ ಮಾಡಲು ಕಾರ್ಮಿಕರು ಸೇರಿದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.