


ಡೈಲಿ ವಾರ್ತೆ: 04/ಆಗಸ್ಟ್/ 2025


ಸಿಎಂ ಸಂಧಾನ ಸಭೆ ವಿಫಲ:
ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಫಿಕ್ಸ್ – ಆ.5 ರ ಬೆಳಗ್ಗೆ 6 ರಿಂದಲೇ ನೌಕರರ ಹೋರಾಟ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗಿನ ಸಾರಿಗೆ ಒಕ್ಕೂಟದ ಸಂಧಾನ ಸಭೆ ವಿಫಲವಾಗಿದ್ದು ನಾಳೆ (ಆಗಸ್ಟ್ 05) ಸಾರಿಗೆ ಮುಷ್ಕರ ನಡೆಯಲಿದೆ.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಅಧಿವೇಶನದ ನಂತರ ವೇತನ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಆಫರ್ ಅನ್ನು ತಿರಸ್ಕರಿಸಿದ ಒಕ್ಕೂಟದ ನಾಯಕರು ಮುಷ್ಕರಕ್ಕೆ ನಿರ್ಧರಿಸಿದ್ದಾರೆ.
1.15 ಲಕ್ಷ ಸರ್ಕಾರಿ ಸಾರಿಗೆ ನೌಕರ ಬಂದ್ ನಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತವಾಗುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಿದ್ದು, ನಾಳೆಯಿಂದ (ಆಗಸ್ಟ್ 5) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದಿರುವ ನೌಕರರು, ಸರ್ಕಾರದ ಮನವೊಲಿಕೆಗಳಿಗೆ ಜಗ್ಗಿಲ್ಲ. ಈ ಹಿನ್ನೆಲೆಯಲ್ಲಿ, ಮುಷ್ಕರವನ್ನು ತಪ್ಪಿಸಲು ಕೊನೆಯ ಕ್ಷಣದ ಕಸರತ್ತು ನಡೆದಿತ್ತು.
ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯನ್ನು ಸಹ ನಡೆದಿದೆ. ಆದ್ರೆ, ಸಭೆಯಲ್ಲಿ ಸಿಎಂ ಬೇಡಿಕೆ ಈಡೇರಿಕೆ ಬಗ್ಗೆ ಯಾವುದುಏ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಸಭೆ ವಿಫಲವಾಗಿದೆ.
ಸಭೆಯ ಬಳಿಕ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಮಾತನಾಡಿ, 24 ತಿಂಗಳ ಹಿಂಬಾಕಿ ನೀಡಲು ಸಾಧ್ಯವಿಲ್ಲ. 14 ತಿಂಗಳು ಆರಿಯರ್ಸ್ ಕೊಡುತ್ತೇವೆ ಎಂದು ಸಿಎಂ ತಿಳಿಸಿದರು. ಮುಂದಿನ ವೇತನ ಪರಿಷ್ಕರಣೆ ಬಗ್ಗೆಯೂ ನಮಗೆ ಭರವಸೆ ಸಿಕ್ಕಿಲ್ಲ. ಹೀಗಾಗಿ ಮುಷ್ಕರ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. 2024ರ ಜ.1ರಿಂದ ಅನ್ವಯವಾಗುವಂತೆ ಹೊಸ ವೇತನ ಪರಿಷ್ಕರಣೆ, ಖಾಸಗೀಕರಣ, ಭ್ರಷ್ಟಾಚಾರ, ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಬೇಕು. ವಿದ್ಯುತ್ಚಾಲಿತ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ನಿಯೋಜಿಸಬೇಕು. ಬೇಡಿಕೆ ಈಡೇರಿಸುವವರೆಗೂ ರಾಜ್ಯಾದ್ಯಂತ ಸಾರಿಗೆ ಸಿಬ್ಬಂದಿ ಮುಷ್ಕರ ಮಾಡುತ್ತೇವೆ. ನಾಳೆಯಿಂದ ರಾಜ್ಯಾದ್ಯಂತ 4 ಸಾರಿಗೆ ನಿಗಮಗಳ ಸಿಬ್ಬಂದಿಯಿಂದ ಧರಣಿ ನಡೆಯುತ್ತೆ. ಸರ್ಕಾರದ ಯಾವುದೇ ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.