ಡೈಲಿ ವಾರ್ತೆ: 05/ಆಗಸ್ಟ್/ 2025

ಸಾರಿಗೆ ಮುಷ್ಕರ: ಹಲವೆಡೆ ರಸ್ತೆಗಿಳಿಯದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು

ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಇದರಿಂದಗಿ ಸಾರ್ವಜನಿಕರಿಗೆ ಆತಂಕ ಶುರುವಾಗಿದೆ. ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್‌ಗಳನ್ನೇ ಅವಲಂಬಿಸಿರುವ ಜನರು ಕೆಲಸಗಳಿಗೆ, ಶಾಲೆಗಳಿಗೆ ಕಾಲೇಜುಗಳಿಗೆ ಹೋಗಲು ಪರದಾಡಬೇಕಾದ ಆತಂಕದಲ್ಲಿದ್ದಾರೆ.
ಹೀಗಿದ್ದರೂ, ಯಾವುದೇ ಚಿಂತೆ ಬೇಡ ಎಂದು ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಅಭಯ ನೀಡಿದೆ. ಯಾಕೆಂದರೆ, ಸಾರಿಗೆ ನಿಗಮಗಳು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ಭಾಗಶಃ ತಟ್ಟಿದೆ. ಹಲವೆಡೆ ಬಸ್​​ಗಳು ಸಂಚರಿಸುತ್ತಿವೆ. ಏರ್​​ಪೋರ್ಟ್ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಯಶವಂತಪುರ ಬಸ್​ ನಿಲ್ದಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ.

ಸಾರ್ವನಿಕರಿಗೆ ತೊಂದರೆ ತಪ್ಪಿಸಲು ಸಾರಿಗೆ ಇಲಾಖೆ ಕ್ರಮಗಳೇನು?
➤ಐಟಿ ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್‌ಗೆ ಸೂಚನೆ
➤ಖಾಸಗಿ ಶಾಲಾ ವ್ಯಾನ್‌ಗಳಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಅವಕಾಶ
➤ಹೆಚ್ಚುವರಿ ಟ್ರಿಪ್‌ ಮೆಟ್ರೋ ರೈಲುಗಳನ್ನ ನಿಯೋಜಿಸಲು ಸೂಚನೆ
➤ರೈಲ್ವೆ ಇಲಾಖೆಯು ಒಳ ಜಿಲ್ಲೆ ರೈಲುಗಳ ಸಂಚಾರ ಹೆಚ್ಚಿಸಬೇಕು
➤ಡಿಸಿ, ಎಸ್‌ಪಿಗಳು ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು

ರಾಜ್ಯ ಸರ್ಕಾರದ ಈ ಸೂಚನೆ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ಮಾಡಿಕೊಂಡಿವೆ. ಬೆಂಗಳೂರಿನಲ್ಲಿ ಸಾರಿಗೆ ಮುಷ್ಕರದಿಂದಾಗಿ ಬಿಎಂಟಿಸಿ ಬಸ್‌ಗಳ ಸಂಚಾರ ಭಾಗಶಃ ಸ್ಥಗಿತವಾಗಿದೆ. ಹೀಗಾಗಿ, ಬೆಂಗಳೂರು ಒಂದರಲ್ಲೇ 4 ಸಾವಿರ ಖಾಸಗಿ ಬಸ್‌ಗಳನ್ನ ನೀಡುವಂತೆ ಖಾಸಗಿ ಬಸ್‌ ಮಾಲೀಕರ ಸಂಘಕ್ಕೆ ಸಾರಿಗೆ ಆಯುಕ್ತರು ಬೇಡಿಕೆ ಇಟ್ಟಿದ್ದಾರೆ. ರಾಜ್ಯಾದ್ಯಂತ 11 ಸಾವಿರ ಬಸ್‌ ಕೇಳಿದ್ದಾರೆ. ಆದರೆ, ಇನ್ನೂ ಅಂತಿಮಗೊಳಿಸಿಲ್ಲ ಎಂದು ಖಾಸಗಿ ಬಸ್‌ ಮಾಲೀಕರ ಸಂದ ನಟರಾಜ್‌ ಶರ್ಮಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬುಧವಾರಕ್ಕೆ ಬಸ್‌ ನೀಡುವಂತೆ ಕೋರಿದ್ದಾರೆ ಎಂದಿರುವುದು ಹೊಸ ಗೊಂದಲ ಸೃಷ್ಟಿಸಿದೆ.

ಈ ಮಧ್ಯೆ, ಸರ್ಕಾರದ ಸೂಚನೆ ದೊರೆಯುತ್ತಿದ್ದಂತೆಯೇ ಜಿಲ್ಲೆಗಳ ಸಾರಿಗೆ ನಿಗಮದ ಮುಖ್ಯಸ್ಥರು ಪ್ರತ್ಯೇಕ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳನ್ನೇ ಇಳಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಸೇರಿದ 85 ಸಿಬ್ಬಂದಿಯನ್ನು ಬಳಸಿ ಚಾಲನೆ ಮಾಡಲು, ಖಾಸಗಿಯಾಗಿ ನೇಮಕವಾದ 100 ಸಿಬ್ಬಂದಿ ಬಳಸಲ ತೀರ್ಮಾನಿಸಲಾಗಿದೆ. ಖಾಸಗಿ ಬಸ್‌ ಮತ್ತು ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ.