ಡೈಲಿ ವಾರ್ತೆ: 06/ಆಗಸ್ಟ್/ 2025

ಮಂಗಳೂರು| ಅಕ್ರಮ ಪಿಸ್ತೂಲ್ ಪತ್ತೆ – ಇಬ್ಬರು ವಶಕ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಅಕ್ರಮವಾಗಿ ಪಿಸ್ತೂಲ್ ಮತ್ತು ಸಜೀವ ಗುಂಡುಗಳನ್ನು ಹೊಂದಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು ನಗರದ ಪಂಪ್‌ವೆಲ್‌ನ ತೌಸಿಫ್ ಅಹ್ಮದ್ (38) ಮತ್ತು ಕೆ.ಸಿ.ರೋಡ್‌ನ ಅಬ್ದುಲ್ ಖಾದರ್(41) ಎಂದು ಗುರುತಿಸಲಾಗಿದೆ.

ಕಂಕನಾಡಿ ನಗರ ಠಾಣೆಯ ಎಸ್ಸೈ ಶಿವಕುಮಾರ್ ಸಿಬ್ಬಂದಿಯ ಜೊತೆಗೂಡಿ ಅಪರಾಹ್ನ ರೌಂಡ್ಸ್ ಕರ್ತವ್ಯ ನಡೆಸುತ್ತಾ ಜೆಪ್ಪಿನಮೊಗರಿನಿಂದ ಕಲ್ಲಾಪು ಕಡೆಗೆ ಹೋಗುತ್ತಿದ್ದಾಗ ಇಬ್ಬರನ್ನು ನಿಲ್ಲಲು ಹೇಳಿದ್ದಾರೆ. ಗಾಬರಿಗೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಅನುಮಾನ ಗೊಂಡ ಪೊಲೀಸರು ಇಬ್ಬರನ್ನು ಪರಿಶೀಲಿಸಿದಾಗ ಪಿಸ್ತೂಲ್ ಪತ್ತೆಯಾಗಿದೆ.

ತಕ್ಷಣ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಪಿಸ್ತೂಲ್ ಹಾಗೂ 6 ಸಜೀವ ಗುಂಡುಗಳನ್ನು ಹೊಂದಿರುವುದು ಕಂಡುಬಂದಿದೆ.

ಈ ವೇಳೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿ‌, ವಿಚಾರಣೆ ನಡೆಸಿದ್ದಾರೆ.