


ಡೈಲಿ ವಾರ್ತೆ: 08/ಆಗಸ್ಟ್/ 2025


ಕಾರು ಚಾಲಕನ ಆತ್ಮಹತ್ಯೆ ಪ್ರಕರಣ: ಸಂಸದ ಡಾ.ಕೆ.ಸುಧಾಕರ್ ಸೇರಿ ಮೂವರ ವಿರುದ್ಧ ಎಫ್ಐಆರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ ಬಾಬು ಎಂಬವರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮ ಸಾವಿಗೆ ಸಂಸದ ಡಾ.ಕೆ.ಸುಧಾಕರ್ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಬಾಬು ಅವರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಸಂಸದರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಬಾಬು ಅವರ ಪತ್ನಿ ಶಿಲ್ಪಾ ನೀಡಿದ ದೂರಿನ ಮೇರೆಗೆ ಎ1 ಆರೋಪಿಯಾಗಿ ಬಿಜೆಪಿ ಸಂಸದ ಡಾ.ಕೆ.ಸುಧಾಕರ್, ಎ2 ನಾಗೇಶ್, ಎ3 ಮಂಜುನಾಥ್ ವಿರುದ್ಧ ಬಿಎನ್ಎಸ್ ಕಾಯ್ದೆ 108, 352, 351(2) 3(5) ಎಸ್ಸಿ-ಎಸ್ಟಿ ಕಾಯ್ದೆಯ ಸೆಕ್ಸನ್ 3 ಸಬ್ (2) ಅಡಿ ಪ್ರಕರಣ ದಾಖಲಾಗಿದೆ.
ಹಣ ವಂಚನೆ, ಬೆದರಿಕೆ, ಮಾನಸಿಕ ಹಿಂಸೆ, ನಿಂದನೆ, ಆತ್ಮಹತ್ಯೆಗೆ ಪ್ರೇರಣೆ ಹಾಗು ದಲಿತ ವ್ಯಕ್ತಿಯ ಮೇಲೆ ದೌರ್ಜನ್ಯ ಆರೋಪಗಳನ್ನು ಮಾಡಲಾಗಿದೆ.
ದೂರಿನ ವಿವರ: ಡಾ.ಕೆ.ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಬಾಬು ಅವರಿಂದ ಮೋಸದಲ್ಲಿ 35 ಲಕ್ಷ ರೂ ಹಣ ಪಡೆದಿದ್ದಾರೆ. ಆದರೆ ಕೆಲಸ ಮಾಡಿಕೊಟ್ಟಿರಲಿಲ್ಲ. ಈ ವಿಚಾರವನ್ನು ಕೇಳಿದಾಗ ನಿಂದಿಸಿ, ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದರು. ಇದರಿಂದ ಮನನೊಂದು ಬಾಬು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಿಲ್ಪಾ ದೂರಿನಲ್ಲಿ ತಿಳಿಸಿದ್ದಾರೆ.
ಡೆತ್ನೋಟ್ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವ ಬಗ್ಗೆ ನಿನ್ನೆ(ಗುರುವಾರ) ಡಾ.ಕೆ.ಸುಧಾಕರ್ ಅವರು ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. “ಆತ್ಮಹತ್ಯೆಗೆ ಶರಣಾಗಿರುವ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಅತೀವ ದುಃಖ ತಂದಿದೆ. ನನ್ನ ಸಾರ್ವಜನಿಕ ಜೀವನದಲ್ಲಿ ಬಾಬು ಎಂಬ ವ್ಯಕ್ತಿಯನ್ನು ನಾನು ನೋಡಿರುವುದಾಗಲಿ, ಭೇಟಿಯಾಗಿರುವುದಾಗಲಿ ನನಗೆ ಗೊತ್ತಿಲ್ಲ. ಎರಡು ಬಾರಿ ಸಚಿವನಾಗಿ, ಮೂರು ಬಾರಿ ಶಾಸಕನಾಗಿ, ಈಗ ಸಂಸದನಾಗಿ ನೂರಾರು ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಈ ವ್ಯಕ್ತಿ ಯಾವ ಕಾರಣಕ್ಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ನನಗೂ ಗೊತ್ತಿಲ್ಲ. ಡೆತ್ನೋಟ್ನಲ್ಲಿರುವ ಉಲ್ಲೇಖವಾಗಿರುವ ನಾಗೇಶ್ ಹಾಗೂ ಮಂಜುನಾಥ್ ಎಂಬವರ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ನಾಗೇಶ್ ಹಾಗೂ ಮಂಜುನಾಥ್ ಕೆಲಸ ಕೊಡಿಸುವುದಾಗಿ ನನ್ನ ಹೆಸರು ಹೇಳಿ 25 ಲಕ್ಷ ರೂ ಹಣ ತೆಗೆದುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ” ಎಂದು ಹೇಳಿದ್ದರು.