


ಡೈಲಿ ವಾರ್ತೆ: 08/ಆಗಸ್ಟ್/ 2025


ಗಂಗೊಳ್ಳಿ| ಜಾನುವಾರು ಕಳ್ಳತನ ಪ್ರಕರಣ – ಓರ್ವ ಆರೋಪಿ ಬಂಧನ

ಕುಂದಾಪುರ: ವಾರಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಪರಾರಿಯಾದ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಬಂಧಿತ ಆರೋಪಿ ಮೂಡುಬಿದರೆ ತಾಲೂಕಿನ ತೋಡಾರ್ ಮೂಲದ ಅನ್ಸಾರ್ ತೋಡಾರ್ (32) ಎಂದು ತಿಳಿಯಲಾಗಿದೆ.
ಈ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ಅಂದಾಜು 6 ಲಕ್ಷ ಮೌಲ್ಯದ ಕಾರು ಹಾಗೂ ಮೊಬೈಲ್ ಫೋನ್ ಇತರ ಸೊತ್ತುಗಳನ್ನು ವಶಪಡಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದಲ್ಲಿ ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ ಜು.31 ರಂದು ಬೆಳಿಗ್ಗಿನ ಜಾವ 01:50 ಗಂಟೆಯ ಸುಮಾರಿಗೆ ಮೇಲ್ ಗಂಗೊಳ್ಳಿ ಸಮೀಪ ಹೋಗುತ್ತಿರುವಾಗ ಒಂದು ಬಿಳಿ ಬಣ್ಣದ ಕಾರನ್ನು ತ್ರಾಸಿ ಕಡೆಗೆ ಮುಖಮಾಡಿ ನಿಲ್ಲಿಸಿದ್ದು ಆಗ ಇಬ್ಬರು ಮೇಲ್ ಗಂಗೊಳ್ಳಿಯ ಬಾಂಬೆ ಬಜಾರ್ ಎದುರು ರಸ್ತೆಯ ಬದಿಯಲ್ಲಿ ಮಲಗಿರುವ ದನವನ್ನು ಹಿಂಸಾತ್ಮಕವಾಗಿ ಹಿಡಿದುಕೊಂಡು ಕಾರಿನ ಹಿಂಬದಿ ಢಿಕ್ಕಿಗೆ ತುಂಬಿಸಿಕೊಂಡು ಕಾರನ್ನು ವೇಗವಾಗಿ ತ್ರಾಸಿ ಕಡೆಗೆ ಚಲಾಯಿಸಿಕೊಂಡಿದ್ದು ಆಗ ಚಂದ್ರ ಹೆಚ್ ಸಿ, ಇವರು ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದು ಕಾರು ಮುಳ್ಳಿಕಟ್ಟೆ ಕಡೆಗೆ ಹೋಗಿದ್ದು ಆಗ ಕಾರಿನ ನಂಬ್ರ ನೋಡಲು ಅಸಾಧ್ಯವಾಗಿರುತ್ತದೆ. ಆರೋಪಿತರು ಸಂಘಟಿತರಾಗಿ ಜಾನುವಾರುಗಳನ್ನು ಕಳವು ಮಾಡಿಕೊಂಡು ಅದನ್ನು ವಧೆ ಮಾಡಿ ಮಾಂಸ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಬಿಳಿ ಬಣ್ಣದ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿಯಾಗಿ ನೀಡಿದ ದೂರಿಗೆ ಸಂಬಂಧಿಸಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಪ್ರಕರಣ ಪತ್ತೆ ಮಾಡುವಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಶೇಷ ತಂಡ ರಚಿಸಿ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ 1) ಮೊಹಮ್ಮದ್ ಅನ್ಸಾರ್@ಅನ್ಸಾರ್ ತೋಡಾರ್ ಇತನನ್ನು ಆ.7 ರಂದು ಮಂಗಳೂರಿನ ಕೂಳೂರಿನಲ್ಲಿ ಕೃತ್ಯಕ್ಕೆ ಬಳಸಿದ ಕಾರು ಸಮೇತ ಆಪಾದಿತನನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸದ್ರಿ ಆರೋಪಿತನ ಮೇಲೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಒಟ್ಟೂ 13 ಪ್ರಕರಣಗಳು ದಾಖಲಾಗಿರುತ್ತದೆ. ಹಾಗೂ ಇನ್ನೂ ಉಳಿದ 3 ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.