ಡೈಲಿ ವಾರ್ತೆ: 08/ಆಗಸ್ಟ್/ 2025

ಧರ್ಮಸ್ಥಳ|ಸಮವಸ್ತ್ರದಲ್ಲಿಯೇ ಬಾಲಕಿ ಹೂತಿದ್ದೆ ಎಂದಿದ್ದ ಕಲ್ಲೇರಿಯಲ್ಲೇ ಶೋಧ – ಕಾಡಿನ ಮಧ್ಯೆ ನಾಲ್ಕು” ಕಡೆ ಅಗೆದರೂ ಸಿಗದ ಕುರುಹು ! ಬರಿಗೈಲಿ ಮರಳಿದ ಎಸ್‌ಐಟಿ ತಂಡ

ಬೆಳ್ತಂಗಡಿ: ತೀವ್ರ ಕುತೂಹಲ ಮೂಡಿಸಿದ್ದ ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಳಿಯ ಕಲ್ಲೇರಿ ಕಾಡಿನಲ್ಲಿ ಹೂತಿಟ್ಟಿದ್ದಾನೆ ಎನ್ನಲಾಗಿದ್ದ ಜಾಗದಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯ ಮಾಡಿದ್ದಾರೆ. 15ನೇ ನಂಬರ್ ಎಂದು ಗುರುತು ಹಾಕಿ, ದೂರುದಾರ ಹೇಳಿದ ರೀತಿಯಲ್ಲೇ ಆಸುಪಾಸಿನ ನಾಲ್ಕು ಕಡೆ ಅಗೆದರೂ ಅಸ್ಥಿಪಂಜರದ ಯಾವುದೇ ಕುರುಹು ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಶಾಲಾ ಸಮವಸ್ತ್ರದಲ್ಲಿಯೇ 15 ವರ್ಷದ ಬಾಲಕಿಯನ್ನು ಕಲ್ಲೇರಿ ಎಂಬಲ್ಲಿ ಹೂತಿದ್ದೆ ಎಂದು ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದು ಒಟ್ಟು ಪ್ರಕರಣ ತೀವ್ರ ಸಂಚಲನ ಎಬ್ಬಿಸಲು ಕಾರಣವಾಗಿತ್ತು. ಧರ್ಮಸ್ಥಳ ಸ್ನಾನಘಟ್ಟದ ಬಳಿಯ 14 ಗುರುತು ಬಳಿಕ ಶುಕ್ರವಾರ ಮಧ್ಯಾಹ್ನ ನೇರವಾಗಿ ದೂರುದಾರ ಕಲ್ಲೇರಿ- ಬೋಳಿಯಾರಿನ ದಟ್ಟ ಅರಣ್ಯಕ್ಕೆ ಕರೆದೊಯ್ದಿದ್ದ. ಇದರಂತೆ ಕಾರ್ಮಿಕರು ಮತ್ತು ಸಣ್ಣ ಹಿಟಾಚಿಯ ಜೊತೆಗೇ ಅಧಿಕಾರಿಗಳು ಕಾಡಿಗೆ ತೆರಳಿದ್ದು ದೂರುದಾರ ಹೇಳಿದಂತೆ ಗುರುತು ಹಾಕಿದ್ದಾರೆ. ಆನಂತರ, ಅಲ್ಲಿನ ರಹಸ್ಯ ಭೇದಿಸುವ ಸಲುವಾಗಿ ಅಗೆತ ಮಾಡಿದ್ದಾರೆ.

ಆನಂತರ, ಯಾವುದೇ ಅಸ್ಥಿಪಂಜರದ ಕುರುಹು ಸಿಗದೇ ಇದ್ದುದರಿಂದ ಅಲ್ಲಿಯೇ ಅಕ್ಕ ಪಕ್ಕದಲ್ಲಿ ನಾಲ್ಕು ಕಡೆ ತೋರಿಸಿದಂತೆ ಅಲ್ಲಿಯೂ ಅಗೆತ ಮಾಡಿದ್ದಾರೆ. ಮೊದಲು ಗುರುತು ಹಾಕಿದ್ದು 15 ಮತ್ತು ಆನಂತರದ್ದು 15 ಎ ಎಂದು ಗುರುತು ಹಾಕಿ ಅಗೆಯಲಾಗಿದೆ. ಮತ್ತೆರಡು ಪಾಯಿಂಟ್ ಗಳಿಗೆ ನಂಬರ್ ನಮೂದಿಸಿಲ್ಲ. ಆದರೂ ಅಲ್ಲಿ ಅಗೆದು ನೋಡಿದರೂ ಯಾವುದೇ ಅಸ್ಥಿಪಂಜರದ ಕುರುಹು ಸಿಕ್ಕಿಲ್ಲ ಎನ್ನುವ ಮಾಹಿತಿ ಎಸ್‌ಐಟಿ ಮೂಲಗಳಿಂದ ತಿಳಿದುಬಂದಿದೆ. 2010 ರಲ್ಲಿ ಕಲ್ಲೇರಿಯಲ್ಲಿ 15 ವರ್ಷದ ಬಾಲಕಿಯನ್ನು ಮೇಲ್ವಿಚಾರಕರ ಸೂಚನೆಯಂತೆ ಹೂತು ಹಾಕಿದ್ದೆ ಎಂದು ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ ಅಧಿಕಾರಿಗಳು ಆ ಜಾಗಕ್ಕೆ ನೇರವಾಗಿ ಕರೆದೊಯ್ದು ಸ್ಥಳ ಶೋಧ ನಡೆಸಿದ್ದಾರೆ. ಶಾಲಾ

ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಹೋಗುವ ಹೆದ್ದಾರಿಯಲ್ಲಿ ಎರಡು ಕಿಮೀ ಸಾಗಿದಾಗ ಕಲ್ಲೇರಿ- ಬೋಳಿಯಾ‌ರ್ ಸಿಗುತ್ತದೆ. ಹೆದ್ದಾರಿಯಿಂದ ಒಳಭಾಗದ ಕಾಡಿಗೆ ದೂರುದಾರ ಪೊಲೀಸರನ್ನು ಕರೆದೊಯ್ದಿದ್ದ. ಇದೇ ಸ್ಥಳದಲ್ಲಿ ಹೂತಿದ್ದೇನೆ ಎಂದು ಹೇಳಿ ಅಗೆತ ಮಾಡಿದರೂ ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಅಲ್ಲಿನ ಶೋಧ ಕಾರ್ಯದ ಬಳಿಕ ಎಸ್‌ಐಟಿ ತಂಡ ಸಂಜೆ 6 ಗಂಟೆ ವೇಳೆಗೆ ಅಲ್ಲಿಂದ ಮರಳಿತ್ತು.