


ಡೈಲಿ ವಾರ್ತೆ: 12/ಆಗಸ್ಟ್/ 2025


ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ: ದೂರುದಾರ ವ್ಯಕ್ತಿಯ ವಿರುದ್ಧ ಸಿಡಿದೆದ್ದ ಭಕ್ತರು, ಪ್ರತಿಭಟನೆ

ಧರ್ಮಸ್ಥಳ: ಧರ್ಮಸ್ಥಳ ಮತ್ತು ಸುತ್ತಮುತ್ತ ಶವಗಳ ಸಾಮೂಹಿಕ ಅಂತ್ಯಕ್ರಿಯೆಯ ಬಗ್ಗೆ ಆಧಾರರಹಿತ ಆರೋಪಗಳನ್ನು ಹರಡುವುದನ್ನು ವಿರೋಧಿಸಿ ಧರ್ಮಸ್ಥಳ ಪರ ಭಕ್ತರು ಸೋಮವಾರ ರಾಜ್ಯದ ಹಲವೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಜೊತೆಗೆ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಕುರಿತು ಎಸ್‌ಐಟಿ ರಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಾಸನ ಧರ್ಮಸ್ಥಳ ಹಿತ ರಕ್ಷಣಾ ಸಮಿತಿಯ ಪ್ರಮುಖ ಸದಸ್ಯರಾದ ಡಾ. ರಮೇಶ್ ಅವರು ಮಾತನಾಡಿ, ಈ ಆಧಾರರಹಿತ ಹೇಳಿಕೆಗಳ ಹಿಂದೆ ಪಿತೂರಿ ಇದೆ, ದೂರು ದಾಖಲಿಸಿದ ಅನಾಮಧೇಯ ವ್ಯಕ್ತಿ ಶವಗಳನ್ನು ಪತ್ತೆಹಚ್ಚಲು ವಿಫಲವಾದರೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರಸ್ತುತದ ಪ್ರಕರಣ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ವಿಚಾರಣೆಯನ್ನು ಭಕ್ತರು ವಿರೋಧಿಸುವುದಿಲ್ಲ. ಆದರೆ, ಸುಳ್ಳು ದೂರುಗಳನ್ನು ದಾಖಲಿಸಿದವರನ್ನು ಶಿಕ್ಷಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ತಪ್ಪಿತಸ್ಥರು ಶಿಕ್ಷೆ ಎದುರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಹಾಸನದಲ್ಲಿ ಬೃಹತ್ ಪ್ರತಿಭಟನಾ ಆಯೋಜಿಸಲಾಗಿದ್ದು, ಪ್ರತಿಭಟನಾ ರ್‍ಯಾಲಿಯಲ್ಲಿ ಹೇಮಾವತಿ ಪ್ರತಿಮೆ ವೃತ್ತದಿಂದ ಪ್ರಾರಂಭವಾಗಿ ನರಸಿಂಹರಾಜ ವೃತ್ತದ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು.
ರ್‍ಯಾಲಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಆ.24ರಂದು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ಸಮಾವೇಶ ನಡೆಸಲು ಚಿಂತನೆ ನಡೆದಿದ್ದು. ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂಜೆ 4 ಗಂಟೆಗೆ ರಾಜ್ಯದ ಪ್ರಮುಖ ಹಿಂದೂ ನಾಯಕರು, ಧಾರ್ಮಿಕ ಮುಖಂಡರು ಸೇರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಸಮಾವೇಶ ನಡೆಸಲು ಯೋಜಿಸಲಾಗುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಆ ಮೂಲಕ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯ ವಿರುದ್ದ ಒಗ್ಗಟ್ಟು ಪ್ರದರ್ಶಿಸಲು ಚಿಂತನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.