



ಡೈಲಿ ವಾರ್ತೆ: 15/ಆಗಸ್ಟ್/ 2025


ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ದೇಶಭಕ್ತಿಯ ಉದ್ದೀಪನ ಆಂತರ್ಯದ ಶಕ್ತಿಯಲ್ಲಿ ವಿಶ್ವಾಸವಿರಲಿ – ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ


ಕುಂದಾಪುರ: ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.

ಕರ್ನಾಟಕ ಸರಕಾರದ ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅತ್ಯಮೂಲ್ಯವಾದ ಸಮಯವನ್ನು ದ್ವೇಷಿಸಲು ಬಳಸಬೇಡಿ; ಇತಿಹಾಸವನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ; ಇತಿಹಾಸವನ್ನು ಅರಿತಾಗ ಮಾತ್ರ ವರ್ತಮಾನವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂದರು.

ಜನ ಸಮುದಾಯದಲ್ಲಿ ಒಗ್ಗಟ್ಟು ಇದ್ದಾಗ ದೇಶ ಮುಂದುವರಿಯುತ್ತದೆ. ಆಚರಣೆಗಳಲ್ಲಿ ವ್ಯತ್ಯಾಸ ಇರಬಹುದು. ಆದರೆ ನಾವೆಲ್ಲರೂ ಒಂದೇ ಎಂಬ ಭಾವ ಆಳವಾಗಿ ಇರಬೇಕು. ನಾನು ಎಂಬ ಅಹಂ ಭಾವಕ್ಕಿಂತ ನಾವು ಎಂಬ ಭಾವ ಬೆಳೆಸಿಕೊಳ್ಳಲು ಒತ್ತು ನೀಡಬೇಕು. ಬದುಕಿನಲ್ಲಿ ಎದುರಾಗುವ ಯಾವುದೇ ಸಮಸ್ಯೆ ನಮ್ಮೊಳಗೆ ಅಂತರ್ಗತವಾಗಿರುವ ಶಕ್ತಿಗಿಂತ ದೊಡ್ಡದಲ್ಲ. ಅಂಕಗಳಿಕೆಗೆ ಆದ್ಯತೆ ನೀಡುವುದಕ್ಕಿಂತ ಚೆಂದನೆಯ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಮುಖ್ಯ ಎಂದು ಕಿವಿಮಾತು ನುಡಿದರು.

ಮೈದಾನದಲ್ಲಿ ಮೆಲ್ಲನೇ ಬೀಸುತ್ತಿದ್ದ ತಂಗಾಳಿಯ ವಾತಾವರಣದಲ್ಲಿ ವಿದ್ಯಾರ್ಥಿಗಳು ಮೊಳಗಿಸಿದ ’ವಂದೇ ಮಾತರಂ..’ ದೇಶಭಕ್ತಿಯನ್ನು ಉದ್ದೀಪಿಸಿತು.2ಸಾವಿರ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಬಾವುಟ ಹಿಡಿದುಕೊಂಡು ʼವಿಜಯೀ ವಿಶ್ವ ತಿರಂಗಾ ಪ್ಯಾರಾʼ ಗೀತೆಯನ್ನು ಹಾಡಿ ಸಂಭ್ರಮಿಸಿದರು.

ಧಾರ್ಮಿಕ ಮುಂದಾಳು ಅನಿಲ್ ಶೆಟ್ಟಿ ಮೊಳಹಳ್ಳಿ, ಕುಂದ ಕನ್ನಡ ಅದ್ಯಯನ ಪೀಠದ ಸದಸ್ಯರಾದ ಕೆ.ಸಿ.ರಾಜೇಶ್, ದಿವಾಕರ್ ಶೆಟ್ಟಿ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಕಾರ್ಯದರ್ಶಿಗಳಾದ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಶ್ರೀ. ಭರತ್ ಶೆಟ್ಟಿ ಹಾಗೂ ಪ್ರಾಂಶುಪಾಲರಾದ ಶ್ರೀ ರಂಜನ್ ಶೆಟ್ಟಿ,ಮುಖ್ಯೋಪಾಧ್ಯಾಯರಾದ ಶ್ರೀ. ಪ್ರದೀಪ್ ವೇದಿಕೆಯಲ್ಲಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ನಿರೂಪಿಸಿದರು.ಶಾಲೆ ಹಾಗೂ ಕಾಲೇಜಿನ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.