ಡೈಲಿ ವಾರ್ತೆ: 16/ಆಗಸ್ಟ್/ 2025

ಯಲ್ಲಾಪುರ: ಬೆಳ್ಳಂಬೆಳಗ್ಗೆ ಲಾರಿ ಹಾಗೂ ಬಸ್ ನಡುವೆ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು, 7ಮಂದಿ ಗಂಭೀರ ಗಾಯ

ಯಲ್ಲಾಪುರ: ನಿಂತಿದ್ದ ಲಾರಿಗೆ ಕೆಎಸ್​​ಆರ್​​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು 7 ಜನರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್​ನಲ್ಲಿ ನಡೆದಿದೆ.

ಮೃತ ಮೂವರು ಬಾಗಲಕೋಟೆ ಮೂಲದವರಾದ ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನಿಲವ್ವ ಹರದೊಳ್ಳಿ (40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಮತ್ತು ಇನ್ನೋರ್ವ 45 ವರ್ಷದ ವ್ಯಕ್ತಿ (ಹೆಸರು ಪತ್ತೆ ಆಗಿಲ್ಲ).
ಇನ್ನು ಗಾಯಗೊಂಡ 7 ಜನರು ಬಾಗಲಕೋಟೆ ಮೂಲದವರು ಎಂದು ತಿಳಿದು ಬಂದಿದೆ.
ಚಿಕ್ಕಚಿಕ್ಕ ಮಕ್ಕಳಿಗೂ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಓವರ್​ಟೇಕ್​ ಮಾಡುವ ಸಂದರ್ಭದಲ್ಲಿ ಬಸ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಫಘಾತ ಸಂಭವಿಸಿದೆ ಎನ್ನಲಾಗಿದ್ದು. ಆಲಮಟ್ಟಿ ಗ್ರಾಮದ ಯಮನಪ್ಪ ಮಾಗಿ ಬಸ್ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.

ಬಾಗಲಕೋಟೆಯಿಂದ ಮಂಗಳೂರು ಕಡೆಗೆ KA 19 F 3470 ನಂಬರ್​ನ ಕೆಎಸ್​​ಆರ್​​ಟಿಸಿ ಬಸ್​​ ತೆರಳುತ್ತಿತ್ತು. ಯಲ್ಲಾಪುರ ಅಂಕೋಲಾ ರಸ್ತೆ ದಟ್ಟ ಕಾಡು ಹಾಗೂ ಘಟ್ಟ ಪ್ರದೇಶದಿಂದ ಕೂಡಿದ ಡೆಂಜರ್ ಹೆದ್ದಾರಿ ಆಗಿದೆ. ಓವರ್​ಟೇಕ್​ ಮಾಡುವ ಸಂದರ್ಭದಲ್ಲಿ ರಸ್ತೆಯಂಚಿನಲ್ಲಿ ನಿಂತಿದ್ದ ಕೇರಳ ಮೂಲದ ಲಾರಿಗೆ ಬಸ್​ ಡಿಕ್ಕಿ ಹೊಡೆದಿದೆ. ಚಾಲಕ ಇಂಡಿಕೇಟರ್​ ಹಾಕದೆ ಕತ್ತಲೆಯಲ್ಲಿ ಲಾರಿ ನಿಲ್ಲಿಸಿದ್ದ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್​ನ ಒಂದು ಬದಿ ಸಂಪೂರ್ಣ ನಜ್ಜು ಗುಜ್ಜಾಗಿದೆ.

ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆ ಮೂಲದ ಮೃತ ಮೂವರು ಕೆಲಸದ ನಿಮಿತ್ತ ಮಂಗಳೂರಿಗೆ ಹೊರಟಿದ್ದರು. ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ, ಪಿಎಸ್ ಐ ಯಲ್ಲಾಲಿಂಗ್ ಕುನ್ನೂರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹವನ್ನ ಯಲ್ಲಾಪುರ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.