



ಡೈಲಿ ವಾರ್ತೆ: 16/ಆಗಸ್ಟ್/ 2025


ಎಳನೀರು ಅಮೃತವಾದ್ರೂ ಸಹ, ಈ 6 ರೀತಿಯ ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ!

ಎಳನೀರು ನಮ್ಮ ಪ್ರಕೃತಿಯಲ್ಲಿ ಸಿಗುವಂತಹ ಅಮೃತ ಎಂದರೆ ತಪ್ಪಾಗಲಾರದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗಾಗಿಯೇ ಇದನ್ನು ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಮಾತ್ರವಲ್ಲ ಎಳನೀರಿನಲ್ಲಿ ಕ್ಯಾಲೋರಿ ಕಡಿಮೆ ಇದೆ, ಜೊತೆಗೆ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುತ್ತದೆ. ಹಾಗಾಗಿ ವ್ಯಾಯಾಮ ಮಾಡಿ ಬಂದ ನಂತರ ಇದನ್ನು ಕುಡಿಯಲಾಗುತ್ತದೆ. ಇದು ದೇಹದಲ್ಲಿ ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಚರ್ಮದ ಕಾಂತಿ ಹೆಚ್ಚಿಸುವುದರಿಂದ ಹಿಡಿದು ಜೀರ್ಣಕ್ರಿಯೆ ವರೆಗೆ, ಇದರ ಆರೋಗ್ಯ ಪ್ರಯೋಜನಗಳು ಸಾಕಷ್ಟಿದೆ. ಆದರೆ ಈ ಅಮೃತದ ಗುಣಗಳಿರುವ ಪಾನೀಯ ಎಲ್ಲರಿಗೂ ಸೂಕ್ತವಲ್ಲ. ಹೌದು ಈ ನೈಸರ್ಗಿಕ ಪಾನೀಯ ಕೆಲವರಿಗೆ ಆರೋಗ್ಯವನ್ನು ಹದಗೆಡಿಸಬಹುದು. ತಜ್ಞರ ಸಲಹೆ ಮತ್ತು ವೈದ್ಯಕೀಯ ಸಂಶೋಧನೆಯ ಆಧಾರದ ಮೇಲೆ, ಎಳನೀರನ್ನು ಕೆಲವರ ಆರೋಗ್ಯ ಪರಿಸ್ಥಿತಿಗೆ ಸೂಕ್ತವಲ್ಲ ಎನ್ನಲಾಗುತ್ತದೆ. ಹಾಗಾದರೆ ಎಳನೀರು ಯಾರಿಗೆ ಒಳ್ಳೆಯದಲ್ಲ? ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಎಳನೀರು ಯಾರಿಗೆ ಒಳ್ಳೆಯದಲ್ಲ? ಯಾಕೆ?
ಮಧುಮೇಹಿಗಳಿಗೆ ಒಳ್ಳೆಯದಲ್ಲ:
ಸಾಮಾನ್ಯವಾಗಿ ಮಧುಮೇಹ ಇರುವವರು ಜಾಗರೂಕರಾಗಿರಬೇಕು ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ ಅಂಶವಿರುತ್ತದೆ. ಒಂದು ಸಣ್ಣ ಗ್ಲಾಸ್ (200 ಮಿಲಿ) ನಲ್ಲಿ ಸುಮಾರು 6 ರಿಂದ 7 ಗ್ರಾಂ ಸಕ್ಕರೆ ಅಂಶವಿರುತ್ತದೆ. ಹಣ್ಣಿನ ರಸಗಳಿಗೆ ಹೋಲಿಸಿದರೆ ಅದು ಕಡಿಮೆ ಆದರೆ ಇದು ಕೂಡ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ನಿಮಗೆ ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧವಿದ್ದರೆ, ಈ ಸಣ್ಣ ಪ್ರಮಾಣವು ಸಹ ಸಕ್ಕರೆ ಮಟ್ಟದಲ್ಲಿ ಹೆಚ್ಚಳಕ್ಕೆ ಕಾಣಬಹುದು, ಅದರಲ್ಲಿಯೂ ಕೆಲವು ಎಳನೀರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇರಿಸಲಾಗುತ್ತದೆ, ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ನಿಮಗೆ ಮಧುಮೇಹ ಇದ್ದರೆ, ಎಳನೀರನ್ನು ಕುಡಿಯುವುದಕ್ಕಿಂತ ಮುಂಚೆ ವೈದ್ಯರ ಸಲಹೆ ಪಡೆದುಕೊಳ್ಳಿ.
ಅಲರ್ಜಿ ಇರುವವರಿಗೆ ಒಳ್ಳೆಯದಲ್ಲ:
ನಿಮಗೆ ಅಲರ್ಜಿ ಇದ್ದರೆ ಎಚ್ಚರದಿಂದಿರಿ. ಎಳನೀರಿನ ಅಲರ್ಜಿ ಬಹಳ ಅಪರೂಪವಾಗಿದ್ದರೂ ಕೂಡ ನಮ್ಮ ಮುಂಜಾಗೃತೆಯಲ್ಲಿ ನಾವಿರಬೇಕು. ಎಳನೀರನ್ನು ಕುಡಿದ ಕೂಡಲೇ ಕೆಲವರಿಗೆ ತುರಿಕೆ, ದದ್ದುಗಳು, ಊತ ಅಥವಾ ಮೈಯಲ್ಲಿ ಅಲ್ಲಲ್ಲಿ ಕೆಂಪು ಬಣ್ಣ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಉಸಿರಾಟದ ತೊಂದರೆಗಳಿಗೂ ಕಾರಣವಾಗಬಹುದು. ಮಕ್ಕಳಲ್ಲಿ ಎಳನೀರಿನಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಎಳನೀರನ್ನು ಕುಡಿದ ಮೇಲೆ ಯಾವುದೇ ರೀತಿಯ ವಿಚಿತ್ರ ಲಕ್ಷಣ ಕಂಡುಬಂದರೆ ಅದನ್ನು ಕುಡಿಯಬೇಡಿ ಕೂಡಲೇ ವೈದ್ಯರ ಸಹಾಯ ಪಡೆಯಿರಿ.
ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ:
ಎಳನೀರು ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ. ಎಳನೀರಿನಲ್ಲಿ ಪೊಟ್ಯಾಸಿಯಮ್ ಅಂಶವಿರುತ್ತದೆ. ಇದು ಆರೋಗ್ಯವಂತ ವ್ಯಕ್ತಿಗಳಿಗೆ ಒಳ್ಳೆಯದಾದರೂ, ಕೂಡ ಮೂತ್ರಪಿಂಡದಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರಿಗೆ ಇದು ಅಪಾಯಕಾರಿ. ಹಾನಿಯಾಗಿರುವ ಮೂತ್ರಪಿಂಡಗಳು ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ತೊಡೆದುಹಾಕಲು ಹೆಣಗಾಡುತ್ತವೆ, ಬಳಿಕ ಅದು ನಿಮ್ಮ ರಕ್ತದಲ್ಲಿ ಸಂಗ್ರಹವಾಗಬಹುದು. ಜೊತೆಗೆ ಹೈಪರ್‌ಕಲೇಮಿಯಾಕ್ಕೆ ಕಾರಣವಾಗಬಹುದು, ಅಂದರೆ ಇದು ನಿಮ್ಮ ಸ್ನಾಯುಗಳು ಮತ್ತು ಹೃದಯದ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ದೌರ್ಬಲ್ಯ, ವಾಕರಿಕೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ, ಅನಿಯಮಿತ ಹೃದಯ ಬಡಿತದಂತಹ ರೋಗಲಕ್ಷಣಗಳು ಕಂಡುಬರುತ್ತದೆ. ಹಾಗಾಗಿ ಮೂತ್ರಪಿಂಡದ ಸಮಸ್ಯೆಗಳಿರುವವರು ಎಳನೀರನ್ನು ಕುಡಿಯುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ.
ಶೀತ, ಜ್ವರ ಇರುವವರು ಕುಡಿಯಬಾರದು:
ಶೀತ ಅಥವಾ ಜ್ವರ ಬಂದಾಗ ಎಳನೀರನ್ನು ಕುಡಿಯುವುದು ಸೂಕ್ತವಲ್ಲ. ಏಕೆಂದರೆ ಇದು ದೇಹವನ್ನು ತಂಪಾಗಿಸುತ್ತದೆ. ಹಾಗಾಗಿ ಇದು ಬೇಸಿಗೆಯ ದಿನಗಳಲ್ಲಿ ಕುಡಿಯುವುದಕ್ಕೆ ಯೋಗ್ಯ. ಶೀತ, ಕೆಮ್ಮು ಅಥವಾ ಜ್ವರದಿಂದ ಬಳಲುತ್ತಿರುವವರಿಗೆ ಒಳ್ಳೆಯದಲ್ಲ. ಇದರ ತಂಪಾಗಿಸುವ ಸ್ವಭಾವವು ಲೋಳೆ ಪ್ರಮಾಣವನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ನಿಮ್ಮ ದೇಹಕ್ಕೆ ಉಷ್ಣತೆಯ ಅಗತ್ಯವಿರುವಾಗ ನಿಮ್ಮ ದೇಹವನ್ನು ತಣ್ಣಗಾಗಿಸುತ್ತದೆ. ಹಾಗಾಗಿ ಅಸ್ವಸ್ಥರಾಗಿರುವವರಿಗೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ಎಳನೀರಿನ ಬದಲು ಶುಂಠಿ ಚಹಾ ಅಥವಾ ಬಿಸಿ ಸೂಪ್‌ಗಳ ಸೇವನೆ ಮಾಡುವುದು ಬಹಳ ಒಳ್ಳೆಯದು.
ಅಧಿಕ ರಕ್ತದೊತ್ತಡ ಇರುವವರಿಗೆ ಒಳ್ಳೆಯದಲ್ಲ:
ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ ಜಾಗರೂಕರಾಗಿರಿ. ಎಳನೀರು ಪೊಟ್ಯಾಸಿಯಮ್ ಅಂಶದಿಂದಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ರಕ್ತದೊತ್ತಡ ಇರುವ ಔಷಧಿಗಳನ್ನು ಸೇವನೆ ಮಾಡುತ್ತಿದ್ದರೆ ಅದರಲ್ಲಿಯೂ ACE ಪ್ರತಿರೋಧಕಗಳು ಅಥವಾ ಪೊಟ್ಯಾಸಿಯಮ್- ಸ್ಪೇರಿಂಗ್ ಮೂತ್ರವರ್ಧಕಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅಂತವರಿಗೆ ಎಳನೀರು ಅಪಾಯಕಾರಿ. ಈ ಔಷಧಿಗಳು ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸುತ್ತವೆ. ಇನ್ನು ಎಳನೀರು ಕೂಡ ಅದನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ ಎದೆ ನೋವು, ಸ್ನಾಯು ಸೆಳೆತ ಅಥವಾ ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗಬಹುದು.
ಎಲೆಕ್ಟ್ರೋಲೈಟ್- ನಿರ್ಬಂಧಿತ ಆಹಾರಕ್ರಮ ಅನುಸರಿಸುವವರಿಗೆ ಒಳ್ಳೆಯದಲ್ಲ:
ಹೃದಯ ಅಥವಾ ಮೂತ್ರಪಿಂಡದ ಸಮಸ್ಯೆಗಳಿಂದಾಗಿ ಕೆಲವರಿಗೆ ಕಡಿಮೆ- ಎಲೆಕ್ಟ್ರೋಲೈಟ್ ಇರುವ ಆಹಾರವನ್ನು ಅನುಸರಿಸಲು ಹೇಳಲಾಗುತ್ತದೆ. ಆದರೆ ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ ಮಿಶ್ರಣವಿರುವ ಎಳನೀರು ಇದನ್ನು ಹಾಳುಮಾಡುತ್ತದೆ. ಈ ಖನಿಜಗಳಲ್ಲಿ ಹೆಚ್ಚಿನವು ಆಯಾಸ, ಸೆಳೆತ ಮತ್ತು ಹೃದಯದ ಲಯದ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಕೂಡ ವಿಶೇಷ ಆಹಾರಕ್ರಮದಲ್ಲಿದ್ದರೆ, ನಿಮ್ಮ ವೈದ್ಯರು ಸುರಕ್ಷಿತವೆಂದು ಹೇಳಿದರೆ ಮಾತ್ರ ಎಳನೀರನ್ನು ಕುಡಿಯಿರಿ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.