


ಡೈಲಿ ವಾರ್ತೆ: 17/ಆಗಸ್ಟ್/ 2025


ಬಿಜೆಪಿಗರ ರ‍್ಯಾಲಿ ಧರ್ಮಸ್ಥಳದ ಪರ, ನ್ಯಾಯದ ಪರ ಅಲ್ಲ – ಡಿಕೆಶಿ

ಬೆಂಗಳೂರು: ಬಿಜೆಪಿಗರು ರ‍್ಯಾಲಿ ಮಾಡ್ತಿರೋದು ಧರ್ಮಸ್ಥಳದ ಪರವಾಗಿಯೇ ಹೊರತು ನ್ಯಾಯದ ಪರ ಅಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳಿಗೆ ಮುಕ್ತಿ ಸಿಗಲಿ, ಅದು ಸತ್ಯನಾ ಅಥವಾ ಸುಳ್ಳಾ ಅನ್ನೋದು ಜನಕ್ಕೆ ಗೊತ್ತಾಗಲಿ ಅಂತಾ ಎಸ್‌ಐಟಿ ರಚನೆ ಮಾಡಿದ್ದೇವೆ. ಅದರಲ್ಲಿ ಈಗ ಏನು ಸಿಕ್ತಿಲ್ಲ ಅಂತ ಗೊತ್ತಾದ ಮೇಲೆ ಬಿಜೆಪಿಗರು ಧರ್ಮಸ್ಥಳದ ಪರವಾಗಿ ರ‍್ಯಾಲಿ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ದಿನ ರ‍್ಯಾಲಿ ಯಾಕೆ ಮಾಡಲಿಲ್ಲ? ಎಸ್‌ಐಟಿ ರಚನೆ ಆದಾಗ ಯಾಕೆ ಅವರು ಮಾತಾಡಲಿಲ್ಲ. ಈಗ ರಾಜಕೀಯ ಮಾಡೋಕೆ ಬಂದಿದ್ದಾರೆ. ಇದು ಧರ್ಮಸ್ಥಳ ಪರ ರ‍್ಯಾಲಿ ಅನ್ನೋದಕ್ಕಿಂತ ಬಿಜೆಪಿಯ ರಾಜಕೀಯ ರ‍್ಯಾಲಿ ಎನ್ನಬಹುದು ಎಂದು ಟೀಕಿಸಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಡಿಕೆಶಿ ಮಾತನಾಡುವಾಗ, ಇದೊಂದು ಖಾಲಿ ಡಬ್ಬ ಏನು ಇಲ್ಲ. ಅಲ್ಲಿ ಕೇವಲ ಸದ್ದು ಜಾಸ್ತಿ ಆಗುತ್ತಿದೆ. ಈ ಪ್ರಕರಣದಲ್ಲಿ ಬಹಳ ಷಡ್ಯಂತ್ರ ನಡೆದಿದೆ. ಯಾರದ್ದು ಷಡ್ಯಂತ್ರ ಎಂದು ಈಗ ನಾನು ಹೇಳಲ್ಲ. ಬಹಳ ಪ್ಲ್ಯಾನ್ ಮಾಡಿ ಅವರ ಮೇಲೆ ಕಪ್ಪು ಚುಕ್ಕೆ ತರಲು ನೋಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಯಾರನ್ನೋ ತೇಜೋವಧೆ ಮಾಡಿ ನೂರಾರು ವರ್ಷದಿಂದ ಬಂದ ಪರಂಪರೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವನ್ಯಾರೋ ಒಬ್ಬ ನ್ಯಾಯಾಲಯಕ್ಕೆ ಹೋಗಿ ಹೇಳಿಕೆ ಕೊಟ್ಟಿದ್ದಾನೆ. ಹೇಳಿಕೆ ನೀಡಿದ್ದರಿಂದ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ಅಶೋಕ್ ರೈ ಮಾತಾಡಿದ್ದಾರೆ. ಯಾರು ಷಡ್ಯಂತ್ರ ಮಾಡುತ್ತಿದ್ದಾರೆ? ಸುಳ್ಳು ಆರೋಪ ಮಾಡುತ್ತಾರೆ ಅವರ ವಿರುದ್ಧ ಆಳಕ್ಕೆ ಆಗಿ ಹೋಗಿ ತನಿಖೆ ಮಾಡಿ ಕಾನೂನು ಕ್ರಮಕ್ಕೆ ಕೈಗೊಳ್ಳಲು ಹೇಳಿದ್ದೇವೆ. ಮುಖ್ಯಮಂತ್ರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಅಂತ ತಿಳಿಸಿದ್ದರು.