ಡೈಲಿ ವಾರ್ತೆ: 17/ಆಗಸ್ಟ್/ 2025

ವಿದ್ಯಾರಣ್ಯ ಅಂಗಳದಲ್ಲಿ ʼಮುದ್ದುಕೃಷ್ಣʼರ ಕಲರವ: ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳಿಗೆ ಸಮಗ್ರ ವ್ಯಕ್ತಿತ್ವ -‘ಸು ಫ್ರಮ್ ಸೋ’ ರವಿಯಣ್ಣ

ಕುಂದಾಪುರ, ಆಗಸ್ಟ್ 17: ಸಾಂಸ್ಕೃತಿಕ ಸ್ಪರ್ಧಾ ವೇದಿಕೆಗಳು ಮಕ್ಕಳ ಪ್ರತಿಭೆಯನ್ನು ಹೊರತರಲು ಸಹಾಯಕವಾಗುತ್ತವೆ. ಮಕ್ಕಳೊಳಗಿನ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ ಎಂದು ‘ಸು ಫ್ರಮ್ ಸೋ’ ಸಿನಿಮಾ ನಟ ಸನಿಲ್ ಗೌತಮ್ (ರವಿಯಣ್ಣ) ಭಾನುವಾರ ಹೇಳಿದರು.

ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಶಾಲೆಯ ಅಂಗಳದಲ್ಲಿ ಕೃಷ್ಟಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಮುದ್ದುಕೃಷ್ಣ ಸ್ಪರ್ಧೆ ಉದ್ಘಾಟನೆ ನೆರವೇರಿಸಿದ ಅವರು, “ಇಂತಹ ಸ್ಪರ್ಧೆಗಳೇ ನನಗೆ ಕಲಾವಿದನಾಗುವುದಕ್ಕೆ ಅಡಿಪಾಯವಾಗಿದ್ದು. ನಾನು ಮೊದಲು ಹಾಕಿದ್ದು ರಾಧೆಯ ವೇಷ. ನಂತರ ಕೃಷ್ಣ ವೇಷ ಹಾಕಿ ಮೂರು ಬಾರಿ ಬಹುಮಾನ ಗೆದ್ದಿದ್ದೇನೆ” ಎಂದು ಬಾಲ್ಯದಲ್ಲಿ ತಮಗಾದ ಪ್ರಭಾವವನ್ನು ಮೆಲುಕು ಹಾಕಿದರು.

ಇಂತಹ ಕಾರ್ಯಕ್ರಮಗಳ ಮೂಲಕ ಸುಜ್ಞಾನ ಸಂಸ್ಥೆಯು ಮಕ್ಕಳ ಬೆನ್ನೆಲುಬಾಗಿ ನಿಂತಿದೆ. ಇದರಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಸಹಾಯವಾಗುತ್ತದೆ ಎಂದು ಅವರು ಮೆಚ್ಚುಗೆಯ ನುಡಿಗಳನ್ನಾಡಿದರು.

ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಪಠ್ಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುತ್ತೇವೆ. ಯುವ ಪೀಳಿಗೆಗೆ ಭಾರತೀಯ ಸಂಸ್ಕೃತಿ ಹಾಗೂ ಆಚರಣೆಯ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಪಠ್ಯಕ್ರಮದ ಜೊತೆಗೆ ಮಕ್ಕಳಿಗೆ ಇಂತಹ ವೇದಿಕೆಯನ್ನು ಕಲ್ಪಿಸಿದರೆ ಅವರ ವ್ಯಕ್ತಿತ್ವ ಸಮಗ್ರವಾಗಿ ರೂಪುಗೊಳ್ಳಲು ಅನುಕೂಲವಾಗುತ್ತದೆ ಎಂದರು.

ಖಜಾಂಚಿ ಭರತ್ ಶೆಟ್ಟಿ ಅವರು ಮಾತನಾಡಿ, “ಮೂರು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಈ ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸುತ್ತಿದ್ದೇವೆ. ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಶ್ರೀಕೃಷ್ಣನು ನಮ್ಮೆಲ್ಲರ ಬದುಕಿಗೂ ಆದರ್ಶವಾಗಬೇಕು. ಕೃಷ್ಣನು ತೋರಿಸಿದ ದಾರಿ ಇಂದಿಗೂ ಪ್ರಸ್ತುತ. ಅದನ್ನು ನಂಬಿ ನಡೆದರೆ ಬದುಕಿನಲ್ಲಿ ಗುರಿ ಮುಟ್ಟಲು ಸಾಧ್ಯ. ದೇವರ ಸ್ವರೂಪವಾದ ಮಕ್ಕಳಿಗೆ ಎಳವೆಯಿಂದಲೇ ಸಂಸ್ಕೃತಿ-ಸಂಸ್ಕಾರದ ಅರಿವು ಮೂಡಿಸಿದರೆ ಮುಂದೆ ಅವರು ಒಳ್ಳೆಯ ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ” ಎಂದು ವಿವರಿಸಿದರು.

ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಅವರು, ಮಕ್ಕಳಿಗೆ ಕೃಷ್ಣ ವೇಷ ಹಾಕಿ ಸಂಭ್ರಮಿಸುವುದೆಂದರೆ ಪ್ರತಿ ತಾಯಿಗೂ ಹಬ್ಬದ ಕ್ಷಣವಾಗಿರುತ್ತದೆ. ತನ್ನ ಮಗುವಿನಲ್ಲಿ ತಾಯಿ ಕೃಷ್ಣನನ್ನು ಕಣ್ತುಂಬಿಕೊಳ್ಳುತ್ತಾಳೆ. ಎಲ್ಲಾ ಮಕ್ಕಳು ಕೃಷ್ಣನ ವ್ಯಕ್ತಿತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಾರೈಸಿದರು.

ವಿಶಾಲವಾದ ಜಗಮಗಿಸುವ ವೇದಿಕೆಯಲ್ಲಿ ನೀಲವರ್ಣ ಕೃಷ್ಣ, ಬಾಯಿ ತುಂಬಾ ಬೆಣ್ಣೆ ಮೆತ್ತಿಕೊಂಡು “ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಎಂದು ಚಾಡಿ ಹೇಳುವಂತೆ ಮುಖ ಊದಿಸಿಕೊಂಡ ಕಳ್ಳ ಕೃಷ್ಣ, ಕೈಯಲ್ಲಿ ಕೊಳಲಿನಿಡಿದು ಮುರಳಿಯ ನಾದವನ್ನು ಎಲ್ಲೆಡೆ ಪಸರಿಸುತ್ತಿರುವ ಚೆಲುವ ಕೃಷ್ಣ… ಹೀಗೆ ಚಿಣ್ಣರ ಬಗೆಬಗೆಯ ಮುದ್ದುಕೃಷ್ಣನ ವೇಷಗಳು ಗಮನಸೆಳೆದವು.

ಸೀನಿಯರ್ ವಿಭಾಗದಲ್ಲಿ ವೈ ಆರಾಧ್ಯ ಭಟ್ ಪ್ರಥಮ ಸ್ಥಾನ, ಶ್ರೀಯಾ ಕಾಂಚನ್ ದ್ವೀತಿಯ ಸ್ಥಾನ, ವೃಷಾಲಿ ಶಾಸ್ತ್ರಿ ತೃತೀಯ ಸ್ಥಾನ ಪಡೆದರು. ಜೂನಿಯರ್ ವಿಭಾಗದಲ್ಲಿ ಆಕೃತಿ .ಎ ಪೂಜಾರಿ ಪ್ರಥಮ ಸ್ಥಾನ, ಶ್ರೀದ ಕೆ.ಕಾಂಚನ್ ದ್ವೀತಿಯ ಸ್ಥಾನ, ಲಕ್ಷ್ಯ ಜೆ.ಕೆ. ತೃತೀಯ ಸ್ಥಾನ ಪಡೆದರು. ಎರಡೂ ವಿಭಾಗದ ಮೊದಲ ಮೂರು ವಿಜೇತ ಮಕ್ಕಳಿಗೆ ಕ್ರಮವಾಗಿ ರೂ.10,000, ರೂ.7,500 ಹಾಗೂ ರೂ.5,000 ನಗದು ಬಹುಮಾನ, ಟ್ರೋಫಿ ಹಾಗೂ ಪ್ರಮಾಣ ನೀಡಲಾಯಿತು. ಭಾಗವಹಿಸಿದ ಪ್ರತಿ ಸ್ಪರ್ಧಿಗೂ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಲಾಯಿತು.

ಭರತನಾಟ್ಯ ಕಲಾವಿದರಾದ ವಿದ್ವಾನ್ ಕೆ.ಭವಾನಿ ಶಂಕರ್, ಯಕ್ಷಗಾನ ಕಲಾವಿದರಾದ ಅಶ್ವಿನಿ ಕೊಂಡದಕುಳಿ, ಭರತನಾಟ್ಯ ಕಲಾವಿದರಾದ ವಿದ್ಯಾ ಸಂದೇಶ್, ಸಂಗೀತ ಶಿಕ್ಷಕಿ ಮತ್ತು ನೃತ್ಯಗಾರ್ತಿ ಮೀನಾ ಕಾರಂತ ಸಾಸ್ತಾನ ತೀರ್ಪುಗಾರರಾಗಿದ್ದರು.ಶಿಕ್ಷಕಿಯರಾದ ಶ್ರೀಮತಿ ಪ್ರೀತಿ ಚಂದ್ರಶೇಖರ ಹಾಗೂ ಶ್ರೀಮತಿ ವಿನುತಾ ಶೆಟ್ಟಿ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿಯಾದ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ, ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯರಾದ ಪ್ರದೀಪ್ .ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.