


ಡೈಲಿ ವಾರ್ತೆ: 17/ಆಗಸ್ಟ್/ 2025


ಬಿಜೆಪಿಯವರು ಮುಂದಿನ ಚುನಾವಣೆಯ ದೂರದೃಷ್ಟಿಯಿಂದ ಧರ್ಮಸ್ಥಳ ಚಲೋ ಹೊರಟಿದ್ದಾರೆ – ಕೋಟ ನಾಗೇಂದ್ರ ಪುತ್ರನ್

ಉಡುಪಿ: ಎಸ್ಐಟಿ ತನಿಖೆ ನಡೆಯುತ್ತಿರುವಾಗಲೇ ಬಿಜೆಪಿಯವರು ಯಾಕೆ ಈ ರೀತಿ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಳ್ಳುತ್ತಾರೆ ಅಂತ ಅರ್ಥ ಆಗುತ್ತಿಲ್ಲ. ಎಸ್ಐಟಿ ತನಿಖೆ ತುಂಬ ಸೂಕ್ಷ್ಮವಾಗಿ ನಡೆಯುತ್ತಿದೆ. ಅಪರಾಧಿಗಳನ್ನು ಮಟ್ಟ ಹಾಕಲು ಪ್ರಯತ್ನ ಪಡುತ್ತಾ ಇದೆ. ಈಗ ಬಿಜೆಪಿಯವರ ವರ್ತನೆ ನೋಡಿದರೆ ಇವರ ಪಕ್ಷದವರೇ ಎಲ್ಲೋ ಅಪರಾಧ ಮಾಡಿದಂತಿದೆ. ಹೇಗಾದರೂ ಮಾಡಿ ಬಚಾವ್ ಆಗಬೇಕು ಅನ್ನೋ ವರ್ತನೆ ತೋರಿಸುತ್ತಿದ್ದಾರೆ.
ವೀರೇಂದ್ರ ಹೆಗ್ಗಡೆ ಅವರು ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದು ಅವರಲ್ಲಿ ಕೋಟಿ ಕೋಟಿ ಹಣ ಇದೆ. ಹೀಗಾಗಿ ಬಿಜೆಪಿಯವರು ಮುಂದಿನ ಚುನಾವಣೆಗಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇದು ಧರ್ಮ ಕ್ಷೇತ್ರ ಧರ್ಮಸ್ಥಳದ ಪರವಾಗಿ ಅಲ್ಲ ಅನ್ನೋದು ವೀರೇಂದ್ರ ಹೆಗ್ಗಡೆ ಅವರಿಗೆ ಮನವರಿಕೆಯಾದರೆ
ಧರ್ಮಸ್ಥಳ ಕ್ಷೇತ್ರದ ನಿಜವಾದ ಭಕ್ತಾದಿಗಳಿಗೆ ಮುಂದಿನ ದಿನದಲ್ಲಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ದೈವ ಮಾನವ ಎಂಬ ನಂಬಿಕೆ ಬರಬಹುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.