


ಡೈಲಿ ವಾರ್ತೆ: 18/ಆಗಸ್ಟ್/ 2025


ಬೆಳ್ಳಂಬೆಳಗ್ಗೆ ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ – ತೀವ್ರ ಶೋಧ

ನವದೆಹಲಿ: ಇಲ್ಲಿನ ದ್ವಾರಕಾದ ದೆಹಲಿ ಪಬ್ಲಿಕ್ ಶಾಲೆ (DPS) ಸೇರಿದಂತೆ ಅನೇಕ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮೂಲಗಳ ಪ್ರಕಾರ, ದೆಹಲಿ ಪೊಲೀಸ್ ತಂಡಗಳು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ದೌಡಾಯಿಸಿದ್ದು, ಪೂರ್ಣ ಶೋಧ ನಡೆಸುತ್ತಿವೆ. ಅಗ್ನಿಶಾಮಕ ದಳಗಳೂ ಸ್ಥಳದಲ್ಲೇ ಬೀಡುಬಿಟ್ಟಿವೆ.
ಪೊಲೀಸರು ಹೇಳುವಂತೆ, ದ್ವಾರಕಾದ ಸೆಕ್ಟರ್-19 ಬಳಿಯ ಸೇಂಟ್ ಥಾಮಸ್ ಶಾಲೆ, ಸೆಕ್ಟರ್ 18 ಎನ ದೆಹಲಿ ಇಂಟರ್ನ್ಯಾಷನಲ್ ಸ್ಕೂಲ್ ಎಡ್ಜ್, ಸೆಂಟ್ರಲ್ ಅಕಾಡೆಮಿ ಸ್ಕೂಲ್, ಸೆಕ್ಟರ್ 10ರ ದ್ವಾರಕಾದ ಜಿಡಿ ಗೋನೆಕಾ ಸ್ಕೂಲ್, ಸೆಕ್ಟರ್ 19ರ ದ್ವಾರಕಾ ಮತ್ತು ಮಾಡರ್ನ್ ಇಂಟರ್ನ್ಯಾಷನಲ್ ಶಾಲೆಗಳಿಗೆ ಬೆದರಿಕೆ ಬಂದಿವೆ. ಎಲ್ಲ ಬೆದರಿಕೆಗಳೂ ಒಂದೇ ಇಮೇಲ್ ಐಡಿಯಿಂದ ಬೆದರಿಕೆ ಬಂದಿರುವುದು ಕುತೂಹಲ ಮೂಡಿಸಿದೆ.
ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಶಾಲೆಗಳಿಗೆ ರಜೆ ಘೊಷಿಸುವಂತೆ ಸೂಚಿಸಿದ್ದಾರೆ. ಇಡೀ ಶಾಲಾ ಆವರಣವನ್ನು ತೀವ್ರವಾಗಿ ಶೋಧಿಸಲಾಗುತ್ತಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಾದ್ಯಂತ 40 ಖಾಸಗಿ ಶಾಲೆಗಳಿಗೆ ಒಂದೇ ದಿನ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು.