ಡೈಲಿ ವಾರ್ತೆ: 18/ಆಗಸ್ಟ್/ 2025

ಹೆಬ್ಬಾಳ ಮೇಲ್ಸೆತುವೆ ಸಂಚಾರ ಸಾರ್ವಜನಿಕರಿಗೆ ಮುಕ್ತ: ಸಿಎಂ ಅವರಿಂದ ಉದ್ಘಾಟನೆ, ಡಿಸಿಎಂ ಅವರಿಂದ ಬೈಕ್ ಮೂಲಕ ಚಾಲನೆ

ಬೆಂಗಳೂರು: ರಾಜಧಾನಿಯ ಟ್ರಾಫಿಕ್​ ದಟ್ಟಣೆಯ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಹೆಬ್ಬಾಳದಲ್ಲಿ ಪ್ರಯಾಣಿಕರ ಸಂಚಾರ ಸುಗಮವಾಗಿಸುವ ನಿಟ್ಟಿನಲ್ಲಿ ಬಹು ದೀರ್ಘದ ಹೆಬ್ಬಾಳದ ನೂತನ ಮೇಲ್ಸೆತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಇಂದು ಉದ್ಘಾಟಿಸಿದರು.

ಈ ನೂತನ ಮೇಲ್ಸೆತುವೆ ವಿಸ್ತರಣೆಯಿದಾಗಿ ಕೆಆರ್​ ಪುರಂ ಹಾಗೂ ನಾಗವಾರದಿಂದ ಮೇಕ್ರಿ ವೃತ್ತಕ್ಕೆ ಸಂಚಾರ ಸುಗಮಗೊಳಿಸಲಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಸೆಂಟ್ರಲ್​ ಕಡೆಗಿನ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿದೆ.

94 ಕೋಟಿ ವೆಚ್ಚದಲ್ಲಿ ಬಿಡಿಎ ಈ ಮೇಲ್ಸೆತುವೆ ನಿರ್ಮಾಣ ಮಾಡಿದ್ದು, ಸುಮಾರು 500-700 ಮೀಟರ್​ನ ಈ ಹಾದಿಯನ್ನು 31 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಮೇಲ್ಸೆತುವೆಯಿಂದಾಗಿ ಹೆಬ್ಬಾಳ ಜಂಕ್ಷನ್​ನಲ್ಲಿ ಟ್ರಾಫಿಕ್​ ದಟ್ಟಣೆ ಶೇ. 30ರಷ್ಟು ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್​, ಹಲವು ವರ್ಷಗಳಿಂದ ಈ ಯೋಜನೆ ಬಾಕಿ ಉಳಿದಿತ್ತು. ನಾನು ಕಚೇರಿಯಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಅಗತ್ಯವಾದ ಎಲ್ಲಾ ನಿಧಿ ಮತ್ತು ಒಪ್ಪಿಗೆ ನೀಡಿದೆ. ಒಟ್ಟಾರೆ ಯೋಜನೆಯಲ್ಲಿ ₹300 ಕೋಟಿಗೆ ಅಂದಾಜಿಸಲಾಗಿತ್ತು. ಇದನ್ನು 180 ಕೋಟಿ ರೂ.ನಲ್ಲಿ ಮುಗಿಸಿದ್ದು, ಮುಂದಿನ ತಿಂಗಳುಗಳಲ್ಲಿ ಹೆಚ್ಚುವರಿ ಮಾರ್ಗ ಮತ್ತು ಸುರಂಗ ಸೇರಿದಂತೆ ಹೆಚ್ಚಿನ ಕೆಲಸಗಳು ಪೂರ್ಣಗೊಳ್ಳಲಿವೆ ಎಂದರು.

ಈ ಮೇಲ್ಸೆತುವೆ ವಿಸ್ತರಣೆಯಿಂದಾಗಿ ಹೆಬ್ಬಾಳದಲ್ಲಿ ಟ್ರಾಫಿಕ್​ ದಟ್ಟಣೆ ತಗ್ಗಲಿದೆ. ಮೇಕ್ರಿ ವೃತ್ತದ ಬಳಿ ಅದರಲ್ಲೂ ಅಂಡರ್​ಪಾಸ್​ ಬಳಿ ಈ ದಟ್ಟಣೆ ಹೆಚ್ಚುವ ಕುರಿತು ಟ್ರಾಫಿಕ್​ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ನಡೆಸಲಾದ ಪ್ರಾಯೋಗಿಕ ಸಂಚಾರಗಳು ಹೆಬ್ಬಾಳದಲ್ಲಿ ಸುಗಮ ಸಂಚಾರವನ್ನು ತೋರಿಸಿದ್ದು, ಮೇಖ್ರಿ ವೃತ್ತದ ಕಡೆಗೆ ಕಾಯುವಿಕೆ ಅವಧಿ ಹೆಚ್ಚಾಗುವ ಕುರಿತು ತಿಳಿಸಿದ್ದಾರೆ
ಎಂದರು.

ಹೆಬ್ಬಾಳ ಮೇಲ್ಸೆತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಭೈರತಿ ಸುರೇಶ್​, ಬಿಡಿಎ ಅಧ್ಯಕ್ಷ ಎನ್​ಎ ಹ್ಯಾರಿಸ್​, ಹಿರಿಯ ಅಧಿಕಾರಿಗಳು ಮತ್ತು ಮಾಜಿ ಸಂಸದೆ ರಮ್ಯಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ದರಾಮಯ್ಯ ಅವರು ರಿಬ್ಬನ್​ ಕಟಿಂಗ್​ ಮೂಲಕ ಮೇಲ್ಸೆತುವೆ ಉದ್ಘಾಟನೆ ಮಾಡಿದರು. ಡಿಸಿಎಂ ತಮ್ಮ ಹಳೆಯ ಬೈಕ್​ ಮೂಲಕ ಈ ಮೇಲ್ಸೆತುವೆ ಮೇಲೆ ಚಾಲನೆ ಮಾಡಿದ್ದು, ಇದಕ್ಕೆ ಸಿಎಂ ಹಸಿರು ನಿಶಾನೆ ತೋರಿದ್ದು, ವಿಶೇಷವಾಗಿತ್ತು.