ಡೈಲಿ ವಾರ್ತೆ: 20/ಆಗಸ್ಟ್/ 2025

ಮಟ್ಕಾ ಜುಗಾರಿ ಅಡ್ಡೆಗೆ ಕೋಟ ಪೊಲೀಸರ ದಾಳಿ – ಮೂವರ ಬಂಧನ

ಕೋಟ : ಮಟ್ಕಾ ಜೂಜಾಟ ಆಡುತ್ತಿದ್ದ ಅಡ್ಡೆಗಳ ಮೇಲೆ ಕೋಟ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾಳಿಯ ವೇಳೆ ನಗದು ವಶ ಪಡಿಸಿಕೊಳ್ಳಲಾಗಿದೆ.

ಕೋಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸರು ಮೂರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ.

ಮೂರು ಪ್ರಕರಣಗಳಲ್ಲೂ ಬಂಧಿತರು ತಾವು ಸ್ವಂತ ಲಾಭಕ್ಕಾಗಿ ಜೂಜಾಟ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಈ ಹಣವನ್ನು ಕಾಡೂರಿನ ಕೃಷ್ಣಯ್ಯ ಎಂಬುವರಿಗೆ ನೀಡುತ್ತಿದ್ದು, ಆತನು ತಮಗೆ ಕಮಿಷನ್ ನೀಡುತ್ತಿದ್ದನೆಂದು ತಿಳಿಸಿದ್ದಾರೆ.

ಆಗಸ್ಟ್ 19 ರಂದು ಸಂಜೆ 6:00 ಗಂಟೆಗೆ ಕೋಟ ಪೊಲೀಸ್‌ ಉಪನಿರೀಕ್ಷಕರಾದ ಪ್ರವೀಣ್ ಕುಮಾ‌ರ್ ಅವರು ನಂಚಾರು ಜಂಕ್ಷನ್‌ ಬಳಿ ನಡೆಸಿದ ದಾಳಿಯಲ್ಲಿ ದೇವೇಂದ್ರ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಆತನಿಂದ ₹4,550 ನಗದು, ಮಟ್ಕಾ ಚೀಟಿ ಹಾಗೂ ಬಾಲ್ ಪೆನ್ ಅನ್ನು ವಶಕ್ಕೆ ಪಡೆದಿದ್ದಾರೆ.

ಅದೇ ದಿನ ರಾತ್ರಿ 7:15 ಗಂಟೆಗೆ ಉಪನಿರೀಕ್ಷಕಿ ಸುಧಾ ಪ್ರಭು ಅವರು ನಂಚಾರು ಬೊಬ್ಬರ್ಯ ಕೊಡ್ಲು ಬಳಿ ದಾಳಿ ನಡೆಸಿ ಉದಯ ಭಾಸ್ಕರ ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ ₹2,270 ನಗದು, ಮಟ್ಕಾ ಚೀಟಿ ಹಾಗೂ ಬಾಲ್ ಪೆನ್ ವಶಕ್ಕೆ ಪಡೆಯಲಾಗಿದೆ.

ಇನ್ನು ರಾತ್ರಿ 8:15 ಗಂಟೆಗೆ ಉಪನಿರೀಕ್ಷಕ ಪ್ರವೀಣ್‌ ಕುಮಾ‌ರ್ ಅವರು ಶಿರಿಯಾರ ಗ್ರಾಮದ ಸ್ಯಾಬ್ರಕಟ್ಟೆ ಜಂಕ್ಷನ್ ಬಳಿ ದಾಳಿ ನಡೆಸಿ ಶಿವರಾಜ್ ಎಂಬುವರನ್ನು ಬಂಧಿಸಿದ್ದಾರೆ. ಅವರ ಬಳಿಯಿಂದ ₹1,830 ನಗದು, ಮಟ್ಕಾ ಚೀಟಿ ಹಾಗೂ ಬಾಲ್ ಪೆನ್ ಅನ್ನು ಜಪ್ತಿ ಮಾಡಲಾಗಿದೆ.