
ಡೈಲಿ ವಾರ್ತೆ: 21/ಆಗಸ್ಟ್/ 2025
ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆದು, ಗಿರೀಶ್ ಮಟ್ಟಣ್ಣ, ಜಯಂತ್ ಟಿ. ಅವರನ್ನು ಕಾರಿನಲ್ಲಿ ಬಂದೋಬಸ್ತ್ ಮೂಲಕ ಬ್ರಹ್ಮಾವರ ಕಡೆಗೆ ಕರೆದುಕೊಂಡು ಹೋಗಲಾಗಿದೆ.
ಬ್ರಹ್ಮವಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಬಂಧ ಆ.20 ರಂದು ನೋಟೀಸ್ ನೀಡಲು ಬಂದ ಪೊಲೀಸರ ಜತೆ ತಿಮರೋಡಿಯಲ್ಲಿ ಅವರ ಪರ ಮಂದಿ ಅನುಚಿತ ವರ್ತನೆ ತೋರಿದ್ದರು. ಈ ಹಿನ್ನೆಲೆಯಲ್ಲಿ ಆ.21 ರಂದು ಉಡುಪಿ ಜಿಲ್ಲಾ ಎಡಿಷನ್ ಎಸ್ಪಿ ಸುಧಾಕರ್ ಹೆಗ್ಡೆ ನೇತೃತ್ವದಲ್ಲಿ 9 ಪೊಲೀಸ್ ವಾಹನದಲ್ಲಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಆಗಮಿಸಿದ್ದಾರೆ. ಈ ಮಧ್ಯೆ ವಾದ ವಿವಾದಗಳು ನಡೆಯುತ್ತಿದ್ದು ತಿಮರೋಡಿಯನ್ನು ವಶಕ್ಕೆ ಪಡೆಯಲಾಗಿದೆ.
ಆ.16 ರಂದು ಫೇಸ್ ಬುಕ್ ಪೇಜ್ ನಲ್ಲಿ ಮಹೇಶ ಶೆಟ್ಟಿ ತಿಮರೋಡಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಹಿಂಧೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸಿನ ದ್ವೇಷ ಭಾವನೆಯನ್ನು ಉಂಟು ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿಯ ವಿರುದ್ಧ ಕಾನೂನು ಕ್ರಮಕ್ಕಾಗಿ ರಾಜೀವ ಕುಲಾಲ್, ಉಡುಪಿ ಗ್ರಾಮಾಂತರ ಬಿಜಿಪಿಯ ಮಂದಾಳತ್ವದಲ್ಲಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 177/2025 US 196 (1), 352, 353(2) BNS ರಂತೆ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆ ವಶಕ್ಕೆ ಪಡೆಯುವ ಸಲುವಾಗಿ ಇಂದು ಆಗಮಿಸಿದ್ದರು.