ಡೈಲಿ ವಾರ್ತೆ: 21/ಆಗಸ್ಟ್/ 2025

ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ, ಇಡೀ ಬಿಜೆಪಿ ಹೊಣೆ: ತಿಮರೋಡಿ ಫಸ್ಟ್‌ ರಿಯಾಕ್ಷನ್‌

ಬೆಳ್ತಂಗಡಿ: ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ ಹಾಗೂ ಇಡೀ ಬಿಜೆಪಿ ನಾಯಕರು ಹೊಣೆ ಎಂದು ಸಾಮಾಜಿಕ ಕಾರ್ಯಕರ್ಯ ಮಹೇಶ್‌ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ಬಿ. ಎಲ್‌ ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಬಳಿಕ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದರು.

ನಮ್ಮ ಉದ್ದೇಶ ಏನಿದ್ದರೂ ಸೌಜನ್ಯಗೆ ನ್ಯಾಯ ಸಿಗಬೇಕು. ಈ ಹೋರಾಟ ಮುಂದುವರಿಯಬೇಕು. ಅತ್ಯಾಚಾರಿಗಳ ಬಂಧನ ಆಗಬೇಕು. ಎಸ್‌ಐಟಿ ತನಿಖೆ ಮುಂದುವರಿಸಬೇಕು ಎಂದು ಆಗ್ರಹಿಸಿದರಲ್ಲದೇ ಬಿಜೆಪಿಯವರ ಪಾಪದ ಕೂಸು ಸರ್ವನಾಶ ಆಗುತ್ತೆ ಎಂದು ನುಡಿದರು.

ಅಲ್ಲದೇ ನಾನೀಗ ಪೊಲೀಸ್‌ ಠಾಣೆಗೆ ಹೋಗ್ತೀನಿ, ಪೊಲೀಸರಿಗೆ ಸರಿಯಾದ ಮಾಹಿತಿ ಕೊಡ್ತೀನಿ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಬೆಂಬಲಿಗರು ʻಜಸ್ಟೀಸ್‌ ಫಾರ್‌ ಸೌಜನ್ಯʼ ಎಂದು ಘೋಷಣೆ ಕೂಗಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.

ಏನಿದು ಪ್ರಕರಣ?
ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ತಿಮರೋಡಿ ಬಿಎಲ್ ಸಂತೋಷ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್‌ ಕುಲಾಲ್‌ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರೀ ಹೈಡ್ರಾಮಾದ ಬಳಿಕ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 8 ವಾಹನಗಳಲ್ಲಿ ತಿಮರೋಡಿ ನಿವಾಸಕ್ಕೆ ತೆರಳಿದ್ದ ಸುಮಾರು 30 ಪೊಲೀಸರ ತಂಡ ಉಜಿರಿಯಲ್ಲಿರುವ ಅವರ ಮನೆಯಲ್ಲೇ ವಶಕ್ಕೆ ಪಡೆದಿದೆ.