ಡೈಲಿ ವಾರ್ತೆ: 22/ಆಗಸ್ಟ್/ 2025

ನೋವಿಗೆ ಮಿಡಿದ ಕೋಟ ‘ಜೀವನ್‌ ಮಿತ್ರ’ ತಂಡ: ಅನಾರೋಗ್ಯಪೀಡಿತರ ಚಿಕಿತ್ಸೆಗೆ ನೆರವು

ಉಡುಪಿ: ಒಂದು ಸಂಘಟನೆಯ ಶಕ್ತಿ ಕೇವಲ ಸಭೆ ಸಮಾರಂಭಗಳಿಗೆ, ಭಾಷಣಗಳಿಗೆ ಸೀಮಿತವಾಗದೆ ಅದು ಕಷ್ಟದಲ್ಲಿರುವವರ ಪಾಲಿಗೆ “ಕರುಣೆಯ ತೋರುವ” ದಯಾನಿಧಿಯಾಗಬೇಕು. ಆಗಲೇ ಅಂತಹ ಸಂಘಟನೆಗೊಂದು ನೆಲೆ, ಬೆಲೆ ಇರುತ್ತದೆ.

ಕೋಟ ಭಾಗದ ಜನಪರ ಕಾರ್ಯಗಳಿಗೆ ಹೆಸರಾದ ‘ಜೀವನ್‌ ಮಿತ್ರ ಸೇವಾ ಟ್ರಸ್ಟ್‌’ ಇದೀಗ ನೋವಿಗೆ ತುಡಿಯುವ, ಮಾನವೀಯತೆಗೆ ಮಿಡಿಯುವ ತನ್ನ ಕಾರ್ಯಗಳಿಂದ ಮೊನ್ನೆಲೆಗೆ ಬಂದಿದೆ. ಟ್ರಸ್ಟ್ ಇದೀಗ ಇನ್ನೊಬ್ಬರ ಜೀವ ಉಳಿಸಲು ಆಪತ್ಬಾಂಧವನಂತೆ ನಿಂತಿದೆ.

ಅನಾರೋಗ್ಯ ಪೀಡಿತರಿಗೆ ಸಹಾಯ : ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕೋಟತಟ್ಟು ಪಡುಕೆರೆಯ ವಿಜಯ್ ಪೂಜಾರಿ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಟ್ರಸ್ಟ್ ಕಾರ್ಯಕರ್ತರು ಮತ್ತು ಸ್ನೇಹಿತರು ಸೇರಿಕೊಂಡು ₹ 69,000 ಹಣ ಸಂಗ್ರಹಿಸಿ ಮಾನವೀಯತೆಯ ಮಹಾ ಪಾಠ ಹೇಳಿದ್ದಾರೆ.

ಈ ಕಾರ್ಯಕ್ಕೆ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಸೇರಿದಂತೆ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ.

ನಿಂತಲ್ಲೇ ಹರಿದು ಬಂದ ನೆರವಿನ ಮಹಾಪೂರ:
ಆಗಸ್ಟ್ 20 ರ ಬುಧವಾರ ಸಾಸ್ತಾನ ಟೋಲ್ ಗೇಟ್ ಬಳಿ ‘ಜೀವನ್‌ ಮಿತ್ರ ಸೇವಾ ಟ್ರಸ್ಟ್‌’ ಮತ್ತು ವಿಜಯ್ ಪೂಜಾರಿ ಅವರ ಸ್ನೇಹಿತರು ಸೇರಿ ಒಂದು ಸಣ್ಣ ಹಣ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಂಡರು. ಇದು ಕೇವಲ ಹಣ ಸಂಗ್ರಹಕ್ಕಿಂತ ಹೆಚ್ಚಾಗಿ, ಸಂಕಷ್ಟದಲ್ಲಿರುವ ವ್ಯಕ್ತಿಯೊಬ್ಬರಿಗೆ ನೆರವಾಗಬೇಕೆಂಬ ಸಾರ್ವಜನಿಕರ ಆಶಯವನ್ನು ಪ್ರತಿಬಿಂಬಿಸಿತು.
ಕ್ಷಣಾರ್ಧದಲ್ಲಿ ಈ ಅಭಿಯಾನಕ್ಕೆ ಸಾರ್ವಜನಿಕರಿಂದ ತೀವ್ರ ಪ್ರತಿಸ್ಪಂದನೆ ವ್ಯಕ್ತವಾಯಿತು. ವಾಹನಗಳಲ್ಲಿ ಪ್ರಯಾಣಿಸುವವರು, ರಸ್ತೆಯ ಪಕ್ಕದಲ್ಲಿ ನಡೆದು ಹೋಗುವವರು ಎಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ಹುಂಡಿಯಲ್ಲಿ ಹಾಕಿ ಮಾನವೀಯತೆ ಮೆರೆದರು.
ಸಂಸ್ಥೆಯ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ:
“ಯಾವುದೇ ಒಂದು ಊರಿನಲ್ಲಿ ಇಂತಹ ಸಂಸ್ಥೆಗಳು ಇದ್ದಾಗ, ಆ ಊರಿನ ಸಣ್ಣಪುಟ್ಟ ಸಮಸ್ಯೆಗಳಿಂದ ಹಿಡಿದು ದೊಡ್ಡ ಕಾರ್ಯಕ್ರಮಗಳಿಗೂ ಸ್ವಯಂಸೇವಕರು ಲಭ್ಯರಾಗುತ್ತಾರೆ.

ಜೀವನ್‌ ಮಿತ್ರ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಸಂತೋಷ ತಂದಿದೆ” ಎಂದು ಪ್ರಶಾಂತ್ ಕುಮಾರ್ ಶೆಟ್ಟಿ ಹೇಳಿದರು. ಕೋಟದ ಪ್ರಸಿದ್ಧ ಶ್ರೀ ಅಮೃತೇಶ್ವರೀ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಯೂ ಆಗಿರುವ ಅವರು, ಅಮೃತೇಶ್ವರೀ ದೇವಿಯಲ್ಲಿ ವಿಜಯ್ ಪೂಜಾರಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. ಹಾಗೆಯೇ, ಸಂಗ್ರಹಿಸಲಾದ ಹಣದಲ್ಲಿ ₹ 60,000 ಮೊತ್ತದ ಚೆಕ್ ಅನ್ನು ಟ್ರಸ್ಟ್ ಪರವಾಗಿ ವಿಜಯ್ ಪೂಜಾರಿಯವರ ಕುಟುಂಬಕ್ಕೆ ಹಸ್ತಾಂತರಿಸಿದರು.

ಕೋಟ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಆಚಾರ್ ಮಾತನಾಡಿ, “ಕೋಟ ಭಾಗದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಬಂದಾಗ ತಕ್ಷಣ ನೆರವಿಗೆ ಧಾವಿಸುವ ಒಂದು ಸಂಸ್ಥೆ ಇದೆ ಎಂದಾದರೆ ಅದು ಜೀವನ್‌ ಮಿತ್ರ. ಇಂತಹ ಸಂಸ್ಥೆಯು ನಮ್ಮೂರಿನ ಭಾಗವಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದರು.

ಜೀವನ್‌ ಮಿತ್ರ ಸೇವಾ ಟ್ರಸ್ಟ್‌ ಮುಖ್ಯಸ್ಥ ನಾಗರಾಜ್ ಪುತ್ರನ್ ಅವರು ಮಾತನಾಡಿ, ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಹುಂಡಿ ಮೂಲಕ ಸಂಗ್ರಹಿಸಲಾದ ₹ 60,000 ಮತ್ತು ಗೂಗಲ್ ಪೇ ಮೂಲಕ ವರ್ಗಾವಣೆಯಾದ ₹ 9,000 ಸೇರಿದಂತೆ ಒಟ್ಟು ₹ 69,000 ಮೊತ್ತವನ್ನು ವಿಜಯ್ ಪೂಜಾರಿಯವರ ಚಿಕಿತ್ಸಾ ವೆಚ್ಚಕ್ಕಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನಾಗೇಂದ್ರ ಪುತ್ರನ್ ಕೋಟ, ವಸಂತ ಸುವರ್ಣ ಕೋಟ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಪಡುಕೆರೆ, ಚಂದ್ರ ಪೂಜಾರಿ, ನಾಗರಾಜ್ ಸೈಬ್ರಕಟ್ಟೆ, ಪ್ರದೀಪ್ ಮೆಂಡನ್, ರಾಕೇಶ್ ಹಂದಟ್ಟು, ಭರತ್ ಗಾಣಿಗ, ಸುರೇಶ್ ಗಾಣಿಗ, ಧನುಷ್ ವಡ್ಡರ್ಸೆ, ಕಿಶೋರ್ ಶೆಟ್ಟಿ ಚಿತ್ರಪಾಡಿ ಹಾಗೂ ಇತರರು ಉಪಸ್ಥಿತರಿದ್ದರು.