ಡೈಲಿ ವಾರ್ತೆ: 22/ಆಗಸ್ಟ್/ 2025

ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಸಮಿತಿಯಿಂದ ಆ.24ರಂದು 25,000ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಪೂಜೆ

ಉಡುಪಿ: ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದವರಿಗೆ, ಸಹಕಾರ ಮಾಡಿದವರಿಗೆ ಶಿಕ್ಷೆಯಾಗಬೇಕು ಹಾಗೂ ಅಲ್ಲಿ ಸತ್ತಂತಹ ಎಲ್ಲಾ ಆತ್ಮಗಳ ಮುಕ್ತಿಗಾಗಿ ಮತ್ತು ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯಿಂದ ಆ.24ರಂದು ರಾಜ್ಯದ ಸುಮಾರು 25,000ಕ್ಕೂ ಅಧಿಕ -ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ದೇವರಿಗೆ ಮೊರೆ ಹಾಗೂ ಪೂಜೆ ಸಲ್ಲಿಸಲಾಗುವುದು ಎಂದು ಸಮಿತಿಯ ಕೆ.ದಿನೇಶ್ ಗಾಣಿಗ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಧರ್ಮಸ್ಥಳ ಮತ್ತು ಉಜಿರೆಯಲ್ಲಿ 2002ರಿಂದ 2012ರವರೆಗೆ 452 ಅಸಹಜ ಸಾವು ಪ್ರಕರಣಗಳು ಸಂಭವಿಸಿದ್ದು, ಇದರಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಹೇಳಿರುವ 262 ಅಸಹಜ ಸಾವುಗಳ ಶವಗಳನ್ನು ಹೂತಿರುವ ಬಗ್ಗೆ ದಾಖಲೆ ದೊರೆತಿದೆ.2012ರಲ್ಲಿ ಆನೆ ಮಾವುತ ನಾರಾಯಣ ಮತ್ತು ಯಮುನಾ ಅವರ ಕೊಲೆ, ದರೋಡೆ ನಡೆದಿತ್ತು. ಇಲ್ಲೂ ಕೂಡಾ ಆರೋಪಿಗಳು ಸಿಕ್ಕಿಲ್ಲ. ಇದಾಗಿ 20 ದಿನದಲ್ಲೇ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಈ ಪ್ರಕರಣವೂ ಇದೇ ದಾರಿಯನ್ನು ಹಿಡಿದಿದೆ. ಇವೆಲ್ಲಾ ಪ್ರಕರಣಗಳು ಧರ್ಮಸ್ಥಳ ಗ್ರಾಮದ ಆಸುಪಾಸಿನಲ್ಲಿ ನಡೆಯುತ್ತಿದ್ದರೂ ಕೂಡಾ ಯಾವ ಪ್ರಕರಣದಲ್ಲೂ ಆರೋಪಿಗಳು ಸಿಗುತ್ತಿಲ್ಲ.

ಈ ಹಿಂದೆ ನಡೆದ ವೇದವಲ್ಲಿ, ಪದ್ಮಲತಾ, ನಾರಾಯಣ ಮತ್ತು ಯಮುನಾ, ಸೌಜನ್ಯ ಕೊಲೆ ನಡೆದಾಗ ಮಾತನಾಡದ, ಅಕ್ವಿಟಲ್ ಕಮಿಟಿ ರಚಿಸುವದರ ಬಗ್ಗೆ ಮೌನವಾದ ಬಿಜೆಪಿ ಶಾಸಕರು ಈಗ ಯಾಕೆ ಹೋರಾಟ ನಡೆಸುತ್ತಿದ್ದಾರೆ ? ಯಾರನ್ನು ಉಳಿಸುವ ಸಲುವಾಗಿ ಹೋರಾಟ ನಡೆಸುತ್ತಿದ್ದಾರೆ ಎಂಬುದು ಜನ ಸಾಮಾನ್ಯರಿಗೆ ತಿಳಿದಿದೆ. ನಾವು ನ್ಯಾಯಾದಾನ ಕೇಳಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಚರ್ಚೆ, ಸಂವಾದಗಳನ್ನು ಕೂಡಾ ನಡೆಸುತ್ತೇವೆ ಎಂದು ಅವರು ತಿಳಿಸಿದರು.

ಸಮಿತಿಯ ತಮ್ಮಣ್ಣ ಶೆಟ್ಟಿ, ಸಚಿನ್ ಶ್ರೀಯಾನ್ ಹಾಗೂ ಅಂಬಿಕಾ ಪ್ರಭು ಉಪಸ್ಥಿತರಿದ್ದರು.