ಡೈಲಿ ವಾರ್ತೆ: 24/ಆಗಸ್ಟ್/ 2025

ಧರ್ಮಸ್ಥಳ ಪ್ರಕರಣ: ಆರೋಪಿ ಚಿನ್ನಯ್ಯನ ಜೊತೆ ಫೋನ್​ ಸಂಪರ್ಕದಲ್ಲಿದ್ದವರಿಗೆ ಶಾಕ್​

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತಿದ್ದಾಗಿ ಹೇಳಿದ್ದ ಆರೋಪಿ ಚಿನ್ನಯ್ಯ ಬಂಧನವಾಗಿದ್ದು, ಕ್ಷಣ ಕ್ಷಣಕ್ಕೂ ಹೊಸ ಅಂಶ ಆಚೆ ಬರುತ್ತಿದೆ. ಸದ್ಯ ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿರುವ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಚಿನ್ನಯ್ಯ ಕೋರ್ಟ್​ ತೆಗೆದುಕೊಂಡು ಹೋಗಿದ್ದ ಮಾನವನ ತಲೆ ಬುರುಡೆ ಬಗ್ಗೆ ತನಿಖೆ ನಡೆಸಿದ್ದಾರೆ.

ಬುರುಡೆ ಟೀಂ ಧರ್ಮಸ್ಥಳ ಗ್ರಾಮದ ಒಂದು ನಿಗೂಢ ಜಾಗದಲ್ಲಿ ತಲೆ ಬುರುಡೆಯನ್ನು ಹೂತು ಚಿನ್ನಯ್ಯಗೆ ಮಾಹಿತಿ ನೀಡಿತ್ತು. ಉತ್ಖನನದ ವೇಳೆ ಆ ಜಾಗವನ್ನು ತೋರಿಸುವ ಪ್ಲ್ಯಾನ್ ಕೂಡ ಮಾಡಲಾಗಿತ್ತು. ಇದರ ಬಗ್ಗೆಯೂ ಎಸ್ಐಟಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇನ್ನು, ಎಸ್​ಐಟಿ ಅಧಿಕಾರಿಗಳು ಚಿನ್ನಯ್ಯನ ಮೊಬೈಲ್​ಗಾಗಿ ಶೋಧ ನಡೆಸಿದ್ದಾರೆ. ಚಿನ್ನಯ್ಯ ನ್ಯಾಯಾಲಯಕ್ಕೆ ತಲೆ ಬುರುಡೆ ತೆಗೆದುಕೊಂಡು ಹೋದಾಗಲೇ ಈತನ ಮೊಬೈಲ್​ ಅನ್ನು ಬುರುಡೆ ಟೀಂ ಪಡೆದುಕೊಂಡಿತ್ತು. ಅಂದಿನಿಂದ ಇಲ್ಲಿಯವರೆಗೂ ಚಿನ್ನಯ್ಯ ಬಳಿ ವಕೀಲರಿಗೆ ಮಾತ್ರ ಮಾತನಾಡಲು ಅವಕಾಶ‌ ಇತ್ತು. ಉಳಿದಂತೆ ಚಿನ್ನಯ್ಯ ಮೊಬೈಲ್ ಬಳಸಲು ಬುರುಡೆ ಟೀಂ ಬಿಡುತ್ತಿರಲಿಲ್ಲ.

ಎಸ್​ಐಟಿ ವಿಚಾರಣೆ ವೇಳೆ ಆರೋಪಿ ಚಿನ್ನಯ್ಯ ತನ್ನ ಬಳಿ ಮೊಬೈಲ್​ ಇಲ್ಲ ಎಂದು ಹೇಳಿದ್ದನು. ಆದರೆ, ಚಿನ್ನಯ್ಯನ ಬಳಿ ಮೊಬೈಲ್​ ಇತ್ತು. ಸದ್ಯ ಆ ಮೊಬೈಲ್​ ಬುರುಡೆ ಗ್ಯಾಂಗ್​ನ ಬಳಿಯೇ ಇದೆ ಎಂದು ಎಸ್​ಐಟಿ ಅಧಿಕಾರಿಗಳಿಗೆ ಗೊತ್ತಾಗಿದೆ. ಇದೀಗ, ಎಸ್​ಐಟಿ ಅಧಿಕಾರಿಗಳು ಆರೋಪಿ ಚಿನ್ನಯ್ಯನ ಮೊಬೈಲ್ ಅನ್ನು ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.

ಎಸ್​ಐಟಿ ಅಧಿಕಾರಿಗಳು ಸದ್ಯ ಚಿನ್ನಯ್ಯನ ಮೊಬೈಲ್​ ನಂಬರ್​ ಆಧಾರದ ಮೇಲೆ ಎರಡು ವರ್ಷದ ಸಿಡಿಆರ್ ಸಂಗ್ರಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಚಿನ್ನಯ್ಯ ಜತೆ ಫೋನ್ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಎದುರಾಗಿದೆ. ಆರೋಪಿ ಚಿನ್ನಯ್ಯ ಯಾರ ಜೊತೆ ಮೊಬೈಲ್​ನಲ್ಲಿ ಮಾತನಾಡಿದ್ದ, ಆತ ಎಲ್ಲೆಲ್ಲಿ ಕೆಲಸ ಮಾಡಿದ್ದ, ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.