ಡೈಲಿ ವಾರ್ತೆ: 24/ಆಗಸ್ಟ್/ 2025

ಸುರತ್ಕಲ್: ಈಜಲು ತೆರಳಿದ್ದ ಯುವಕ ಸಮುದ್ರದಲ್ಲಿ ಮುಳುಗಿ ಸಾವು, ಇನ್ನೋರ್ವನ ರಕ್ಷಣೆ!

ಸುರತ್ಕಲ್: ಇಲ್ಲಿನ ಸಸಿಹಿತ್ಲು ಮೂಂಡಾ ಬೀಚ್ ಬಳಿ ಸಮುದ್ರ ಇಳಿದಿದ್ದ ಇಬ್ಬರು ಯುವಕರ ಪೈಕಿ ಓರ್ವ ಮೃತಪಟ್ಟು ಇನ್ನೊರ್ವನನ್ನು ಸ್ಥಳೀಯರು ರಕ್ಷಿಸಿದ ಘಟನೆ ಸಸಿಹಿತ್ಲು ಎಂಬಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ಮೃತ ಯುವಕ ಪಡುಪಣಂಬೂರು ಕಜಕತೋಟ ನಿವಾಸಿ ದಿ. ಅನ್ವರ್ ಅವರ ಮಗ ಮುಹಮ್ಮದ್ ಸಮೀ‌ರ್ (23) ಎಂದು ತಿಳಿದು ಬಂದಿದೆ. ಪಡುಪಣಂಬೂರು ಕಜಕತೋಟ ನಿವಾಸಿ ಅಬೂಬಕರ್ ಅವರ ಮಗ ಐಮಾನ್ (23) ಎಂಬಾತನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ಒಂದೇ ಕುಟುಂಬದ ಆರು ಮಂದಿ ಸಹೋದರರು ಭಾನುವಾರ ಸಂಜೆ ಸಸಿಹಿತ್ಲು ಮೂಂಡಾ ಬೀಚ್ ವಿಹಾರಕ್ಕೆಂದು ತೆರಳಿದ್ದರು.
ಈ ವೇಳೆ ಇಬ್ಬರು ಯುವಕರು ನೀರಿನಲ್ಲಿ ಆಡುತ್ತಿದ್ದ ಸಂದರ್ಭ ಬೃಹತ್ ಅಲೆಯ ಸೆಳೆತಕ್ಕೆ ಸಿಲುಕಿ ಮುಹಮ್ಮದ್ ಸಮೀರ್ ಮತ್ತು ಐಮಾನ್ ಸಮುದ್ರ ಪಾಲಾಗಿದ್ದರು.
ಉಳಿದವರ ಬೊಬ್ಬೆಕೇಳಿ ಸ್ಥಳಕ್ಕೆ ಬಂದ ಸ್ಥಳಿಯ ನಿವಾಸಿ ಮೀನುಗಾರರು ಇಬ್ಬರನ್ನೂ ರಕ್ಷಿಸಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ಪೈಕಿ, ಐಮಾಮ್ ಅಪಾಯದಿಂದ ಪಾರಾಗಿದ್ದು, ಮುಹಮ್ಮದ್ ಸಮೀರ್ ಮೃತಪಟ್ಟಿದ್ದಾರೆ.

ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.