ಡೈಲಿ ವಾರ್ತೆ: 27/ಆಗಸ್ಟ್/ 2025

ಸುಜ್ಞಾನ ಪಿಯು ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನೂತನ ದಳಗಳ ಉದ್ಘಾಟನೆ: ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಏಕತೆಯ ಮನೋಭಾವ-ಪಿ.ಜಿ.ಆರ್.ಸಿಂಧ್ಯ

ಕುಂದಾಪುರ: ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕಾರಿಯಾಗಿದೆ. ಶಿಸ್ತುಬದ್ಧ ಜೀವನ ನಡೆಸುವುದಕ್ಕೆ ಇದು ದಾರಿದೀಪ. ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗಿಯಾಗಿ ಸೇವೆ ಮಾಡುವ ಮೂಲಕ ನಾವೆಲ್ಲರೂ ಒಂದು ಎಂಬ ಭಾವ ಮೂಡುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್.ಸಿಂಧ್ಯ ಮಂಗಳವಾರ ನುಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆ ಹಾಗೂ ಕುಂದಾಪುರ ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಬನ್ನಿಸ್, ಕಬ್ಸ್ ಮತ್ತು ಬುಲ್ ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೇಂಜರ್ಸ್ ರೋವರ್ಸ್ ನೂತನ ದಳಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ 75 ವರ್ಷಗಳ ಇತಿಹಾಸವಿದೆ. ಇದು ಮಕ್ಕಳಲ್ಲಿ ನಾಯಕತ್ವವನ್ನು ಬೆಳೆಸುತ್ತದೆ. ಮಕ್ಕಳು ಭಗವಂತನ ಮೇಲೆ ನಂಬಿಕೆ ಹೊಂದಿ ಶ್ರಮ ಪಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆತ್ಮಸಾಕ್ಷಿಗೆ ಮೋಸ ಮಾಡದಂತೆ ಬಾಳಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದು. ವಿಜ್ಞಾನಿ ಪ್ರೊ. ಸಿ.ಎನ್.ಆರ್ ರಾವ್, ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣಮೂರ್ತಿ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಇವರೆಲ್ಲರೂ ಸ್ಕೌಟ್ಸ್ ಮತ್ತು ಗೈಡ್ಸ್ ಗರಡಿಯಲ್ಲಿ ಬೆಳೆದವರು. ಮಕ್ಕಳಿಗೆ ಇಂಥವರ ಬದುಕು ಮಾದರಿಯಾಗಬೇಕು ಎಂದರು.

ಮುಂದುವರಿದು, ಬೇರೆಯವರ ಬಗ್ಗೆ ದ್ವೇಷ ಭಾವವನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವುದನ್ನು ಬಿಟ್ಟು ಸಮಾನತೆಯ ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರ ಸಂಕೇತಿಸುತ್ತದೆ ಎಂದು ತಿಳಿಸಿದರು.

ಎಳವೆಯಿಂದಲೇ ಶಿಸ್ತುಬದ್ಧ ಜೀವನದ ಕುರಿತು ಸ್ಕೌಟ್ಸ್ ಮತ್ತು ಗೈಡ್ಸ್ ತಿಳಿಸಿಕೊಡುತ್ತದೆ. ಶತಮಾನಗಳ ಇತಿಹಾಸವಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳುವುದರಿಂದ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಬಹುದು. ಸುಜ್ಞಾನ ಸಂಸ್ಥೆಯು ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉಡುಪಿ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಅವರು ಹೇಳಿದ್ದರು.

ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕವಾಗಿದೆ; ಪಠ್ಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ನಮ್ಮ ಸಂಸ್ಥೆಯಲ್ಲಿ ಒತ್ತು ನೀಡುತ್ತೇವೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ. ಮಕ್ಕಳಲ್ಲಿ ದೇಶಭಕ್ತಿಯ ಜೊತೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದಕ್ಕೆ ಪೂರಕವಾಗುತ್ತದೆ ಎಂದರು.

ಖಜಾಂಚಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.. ಶಿಕ್ಷಕಿ ಪ್ರೀತಿ ಚಂದ್ರಶೇಖರ ನಿರೂಪಿಸಿದರು.. ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಜನಾರ್ಧನ ಕೊಡವೂರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಸಮುನಾ ಶೇಖರ್, ಪ್ರಾಂಶುಪಾಲರಾದ ರಂಜನ್ ಬಿ.ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ. ವೇದಿಕೆಯಲ್ಲಿದ್ದರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.