


ಡೈಲಿ ವಾರ್ತೆ: 30/ಆಗಸ್ಟ್/ 2025


ಬೆಂಗಳೂರು ಮೂಲದ ಮಹಿಳೆ ಕೊಲ್ಲೂರು ಸೌಪರ್ಣಿಕಾ ನದಿ ಬಳಿ ನಾಪತ್ತೆ!

ಕೊಲ್ಲೂರು: ಬೆಂಗಳೂರು ಮೂಲದ ವಿವಾಹಿತ ಮಹಿಳೆಯೋರ್ವರು ಕಳೆದ 2 ದಿನಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದ ಅವರು ಏಕಾಏಕಿ ನಾಪತ್ತೆಯಾಗಿದ್ದು, ಆಕೆಯ ನಿಗೂಢ ಕಣ್ಮರೆ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.
ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಅವರ ಪುತ್ರಿ ವಸುಧಾ ಚಕ್ರವರ್ತಿ (46) ಅವರು ಆ. 28ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿದೆಡೆಗೆ ಸಾಗಿ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು.
ಪೊಲೀಸರು ಹಾಗೂ ಗ್ರಾಮಸ್ಥರು ಸೌಪರ್ಣಿಕಾ ನದಿ ಸಹಿತ ವಿವಿಧೆಡೆ ಹುಡುಕಾಟ ನಡೆಸಿದರೂ ಆಕೆಯ ಪತ್ತೆಯಾಗಿಲ್ಲ. ಕಾರಿನಲ್ಲಿ ಮೊಬೈಲ್ ಹಾಗೂ ಇನ್ನಿತರ ವಸ್ತುಗಳು ಕಂಡುಬಂದ ಹಿನ್ನೆಲೆಯಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಆಕೆಯ ವಿಳಾಸ ಪತ್ತೆಯಾಯಿತು.
ಈ ಬಗ್ಗೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.
ಸೌಪರ್ಣಿಕಾ ನದಿಯಲ್ಲಿ ಈಜುತ್ತಿರುವುದು ಸಿ.ಸಿ. ಕೆಮರಾದಲ್ಲಿ ಸೆರೆ :
ದೇಗುಲದ ವತಿಯಿಂದ ಸೌಪರ್ಣಿಕಾ ನದಿ ಬಳಿ ಅಳವಡಿಸಲಾದ ಸಿ.ಸಿ.ಕೆಮರಾದಲ್ಲಿ ಆಕೆ ಬಹುದೂರ ಈಜಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಉತ್ತಮ ಈಜುಗಾರ್ತಿ ಯಾಗಿರುವ ವಸುಧಾ ಅವರು ಬಹುದೂರ ಈಜಿ ದಡ ಸೇರಿದರೇ ಅಥವಾ ಉಕ್ಕಿ ಹರಿಯುತ್ತಿರುವ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಹೋದರೇ ಎಂಬುವುದು ಇನ್ನೂ ಪ್ರಶ್ನಾರ್ಥಕವಾಗಿದೆ.
ಮುಳುಗುತಜ್ಞ, ಅಗ್ನಿಶಾಮಕ ದಳದಿಂದ ಶೋಧ: ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಅಗ್ನಿಶಾಮಕ ದಳದವರು ನದಿಯ ವಿವಿಧ ಕಡೆ ನಾಪತ್ತೆಯಾದ ಮಹಿಳೆಯ ಶೋಧ ಕಾರ್ಯ ನಡೆಸಿದರೂ ಸಂಜೆಯ ತನಕ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ.
ನಾಪತ್ತೆಯಾದ ಮಹಿಳೆಯ ಪೋಷಕರು ಹಾಗೂ ಕುಟುಂಬ ಸದಸ್ಯರು ಸುದ್ದಿ ತಿಳಿದ ತತ್‌ಕ್ಷಣ ಕೊಲ್ಲೂರಿಗೆ ಆಗಮಿಸಿದ್ದಾರೆ. ಆಕೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ವಿವಾಹಿತರಾಗಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ವಸುಧಾ ವಿವಿಧ ತೀರ್ಥ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಒಂಟಿಯಾಗಿ ತೆರಳಿ ಧ್ಯಾನಾಸಕ್ತರಾಗುತ್ತಿದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ನಾಪತ್ತೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆಕಿದಲ್ಲಿ ಕೊಲ್ಲೂರು ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.