


ಡೈಲಿ ವಾರ್ತೆ: 30/ಆಗಸ್ಟ್/ 2025


ದಾವಣಗೆರೆ: ಆಕ್ಷೇಪಾರ್ಹ ಫ್ಲೆಕ್ಸ್ ತೆರವು ವಿಚಾರ – ಹಿಂದೂ ಸಂಘಟನೆ ಮುಖಂಡ ಸತೀಶ್ ಪೂಜಾರಿ ಬಂಧನ, ಬಿಡುಗಡೆ

ದಾವಣಗೆರೆ: ಗಣೇಶ ಹಬ್ಬದ ಪ್ರಯುಕ್ತ ಅಳವಡಿಸಲಾಗಿದ್ದ ಆಕ್ಷೇಪಾರ್ಹ ಫ್ಲೆಕ್ಸ್ ತೆರವುಗೊಳಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಲ್ಲದೇ, ಸ್ಥಳದಲ್ಲಿ ಅಶಾಂತಿ ಮೂಡಿಸಲು ಜನರಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಹಿಂದೂ ಸಂಘಟನೆ ಮುಖಂಡ ಸತೀಶ್ ಪೂಜಾರಿಯನ್ನು ವಿದ್ಯಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ತಡರಾತ್ರಿ ಅವರನ್ನು ಬಿಡುಗಡೆ ಮಾಡಿದ್ದಾರೆ.

ಠಾಣೆ ಎದುರು ಜಮಾಯಿಸಿದ್ದ ಕಾರ್ಯಕರ್ತರು: ಆಕ್ಷೇಪಾರ್ಹ ಫ್ಲೆಕ್ಸ್ ತೆರವು ಮಾಡಿದ್ದನ್ನು ಹಿಂದೂ ಸಂಘಟನೆ ಮುಖಂಡರು ಪ್ರತಿಭಟನೆ ಮಾಡುವ ಮೂಲಕ ಖಂಡಿಸಿದ್ದರು. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಹಿಂದೂ ಜಾಗರಣ ವೇದಿಕೆ ರಾಜ್ಯ ದಕ್ಷಿಣ ವಿಭಾಗೀಯ ಸಹ ಸಂಚಾಲಕ ಸತೀಶ್ ಪೂಜಾರಿ ಅಶಾಂತಿ ಮೂಡಿಸಲು ಜನರಿಗೆ ಪ್ರಚೋದನೆ ಮಾಡಿದ್ದಾರೆ ಎಂಬ ಅರೋಪದ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸರು ಅವರನ್ನು ಬಂಧಿಸಿದ್ದರು. ಮನೆಯಿಂದ ರಾತ್ರಿಯೇ ಠಾಣೆಗೆ ಕರೆತಂದಿದ್ದರು. ಈ ವಿಚಾರ ತಿಳಿದ ನೂರಾರು ಹಿಂದೂ ಸಂಘಟನೆ ಕಾರ್ಯಕರ್ತರು, ಯುವಕರು ರಾತ್ರಿಯೇ ವಿದ್ಯಾನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಹಿಂದೂ ಸಂಘಟನೆ ಮುಖಂಡನ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.
ಠಾಣೆ ಬಳಿ ಸೇರಿರುವ ಯುವಕರು ಹಾಗೂ ಪೊಲೀಸರು
ಶುಕ್ರವಾರ ರಾತ್ರಿ ಬಂಧಿಸಿದ್ದ ಪೊಲೀಸರು ಬಳಿಕ ಠಾಣೆ ಬೇಲ್ ಮೇಲೆ ತಡರಾತ್ರಿಯೇ ಬಿಡುಗಡೆ ಮಾಡಿ ಕಳಿಸಿದರು.