


ಡೈಲಿ ವಾರ್ತೆ: 01/ಸೆ./2025


ಸುಳ್ಳು ಸುದ್ದಿ ಹರಡಿದ ಆರೋಪ: ಮಟ್ಟಣ್ಣನವರ್, ತಿಮರೋಡಿ ವಿರುದ್ಧ ಮತ್ತೆ ಎಫ್‌ಐಆರ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.
ಮಟ್ಟಣ್ಣನವರ್ ಮತ್ತು ತಿಮರೋಡಿ ಸಮಾಜದ ಸೌಹಾರ್ದಮಯ ವಾತಾವರಣ ಕದಡಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮದ ಪ್ರವೀಣ್ ಕೆ.ಆರ್ ದೂರು ನೀಡಿದ್ದಾರೆ. ಆ.30ರಂದು ಯುಟ್ಯೂಬ್‌ನಲ್ಲಿ ಕಂಡ ವಿಡಿಯೊವೊಂದರಲ್ಲಿ ಮದನ್ ಬುಗುಡಿ ಎಂಬ ವ್ಯಕ್ತಿಯ ಜತೆಗೂಡಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಸಮಾಜದ ಸ್ವಾಸ್ಥ್ಯ ಕದಡುವ ಮಾತುಗಳನ್ನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಎಸ್‌ಪಿ ವಿವರಿಸಿದ್ದಾರೆ.
ಮಟ್ಟಣ್ಣನವರ್ ಮತ್ತು ತಿಮರೋಡಿ ಸೌಹಾರ್ದ ಕೆಡಿಸುವ ಮತ್ತು ಭಾವನೆಗಳಿಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರವೀಣ್ ಕೆ.ಆರ್ ದೂರಿನಲ್ಲಿ ತಿಳಿಸಿದ್ದಾರೆ. ಬ್ಲಾಗರ್‌ಗಳು ಮತ್ತು ಇತರ ಕೆಲವು ವ್ಯಕ್ತಿಗಳನ್ನು ಸೇರಿಸಿಕೊಂಡು ಕೆಲವು ದಿನಗಳಿಂದ ಇಬ್ಬರೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸಂಚು ಹೂಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಭಾರತೀಯ ನ್ಯಾಯಸಂಹಿತೆಯ ಕಲಂ 204, 319(2), 353(2), ಮತ್ತು 3(5) ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅರುಣ್ ತಿಳಿಸಿದ್ದಾರೆ.