


ಡೈಲಿ ವಾರ್ತೆ: 01/ಸೆ./2025


ಗುಂಡ್ಲುಪೇಟೆಯಲ್ಲಿ ಭೀಕರ ಸರಣಿ ಅಪಘಾತ – ಬೈಕ್ ಸವಾರ ಸಾವು

ಚಾಮರಾಜನಗರ: ಸರಣಿ ಅಪಘಾತ ನಡೆದು
ಬೈಕ್ ಸವಾರನೋರ್ವ ಮೃತಪಟ್ಟಿರುವ ಘಟನೆ ಸೆ. 1 ರಂದು ಸೋಮವಾರ ಬೆಳಗ್ಗೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣ ಸಮೀಪದ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಭೀಮನಬೀಡು ಗ್ರಾಮದ ಮನೋಜ್(23) ಮೃತ ಬೈಕ್ ಸವಾರ. ರಾಘವಾಪುರ ಗ್ರಾಮದ ಅಭಿ, ಹೆಗ್ಗಡಹಳ್ಳಿ ಗ್ರಾಮದ ಮಹೇಶ್ ಎಂಬುವವರಿಗೆ ತೀವ್ರ ಗಾಯಗಳಾಗಿದೆ.
ಕೇರಳದಿಂದ ಗುಂಡ್ಲುಪೇಟೆ ಮಾರ್ಗವಾಗಿ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿ ಮುಂದೆ ಹೋಗುತ್ತಿದ್ದ ಕಾರಿಗೆ ಗುದ್ದಿದೆ. ಇದರಿಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಪಕ್ಕದ ರಸ್ತೆಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ. ಅವಘಡದಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಮನೋಜ್, ಅಭಿ, ಮಹೇಶ್ ಗೆ ತೀವ್ರತರವಾದ ಗಾಯಗಳಾಗಿದೆ. ಗುಂಡ್ಲುಪೇಟೆ ಠಾಣೆ ಪೊಲೀಸ್ ಕೂಡಲೇ ದೌಡಾಯಿಸಿ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ವಾಹನಗಳನ್ನು ವಶಕ್ಕೆ ಪಡೆದಿರುವ ಗುಂಡ್ಲುಪೇಟೆ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.