


ಡೈಲಿ ವಾರ್ತೆ: 02/ಸೆ./2025


ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್

ರಾಮನಗರ: ಧರ್ಮಸ್ಥಳ ಸಂಸ್ಥೆಯ ಸಮಾಜಸೇವೆ ಜನರಿಗೆ ಗೊತ್ತಿದೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಈ ಪ್ರಕರಣದ ಪಾತ್ರದಾರಿಗಳು ಹಾಗೂ ಸೂತ್ರದಾರಿಗಳನ್ನ ಕಂಡುಹಿಡಿದು ಸೂಕ್ತ ಶಿಕ್ಷೆ ಕೊಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ಹೇಳಿದ್ದಾರೆ.
ಧರ್ಮಸ್ಥದಲ್ಲಿ ಬಿಜೆಪಿ-ಜೆಡಿಎಸ್ ಪ್ರತ್ಯೇಕ ಸಮಾವೇಶ ನಡೆಸಿದ ವಿಚಾರ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಎರಡೂ ಪಕ್ಷ ಒಂದೇ ದಿನ ಸಮಾವೇಶ ಮಾಡಿದ್ರೆ ತುಂಬಾ ಓವರ್ ಕ್ರೌಡ್ ಆಗುತ್ತೆ. ಸೋಮವಾರ ಕೂಡ 40 ಸಾವಿರ ಜನ ಬಂದಿದ್ದರು. ಆದರೆ ಇಬ್ಬರ ಉದ್ದೇಶ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ತಡೆಯಬೇಕು. ಧರ್ಮಸ್ಥಳದಲ್ಲಿ ಸರ್ವ ಧರ್ಮ ಸಮ್ಮೇಳನ ಕೂಡಾ ನಡೆಯುತ್ತೆ. ಈ ಅಪಪ್ರಚಾರವನ್ನ ಸರ್ವ ಧರ್ಮಗಳೂ ಖಂಡನೆ ಮಾಡಬೇಕು ಎಂದರು.
ಷಡ್ಯಂತ್ರ ಮಾಡಿರುವವರು ತಮಿಳುನಾಡು, ಕೇರಳದವರಿದ್ದಾರೆ. ಹೊರಗಿನವರ ಪಾತ್ರ ಇರುವ ಸಾಧ್ಯತೆ ಕೂಡ ಇದೆ. ಹಾಗಾಗಿ ಇದನ್ನ ಕೇಂದ್ರದ ಒಂದು ಏಜೆನ್ಸಿ ತನಿಖೆ ಮಾಡಬೇಕಿದೆ. ಆ ಭಾಗದ ಸಂಸದರು ಈಗಾಗಲೇ ಕೇಂದ್ರ ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದಾರೆ. ಎಸ್‌ಐಟಿ ತನಿಖೆಯ ವರದಿಯೂ ಬರಲಿ, ಕೇಂದ್ರದ ತನಿಖೆಯೂ ಆಗಲಿ ಎಂದು ತಿಳಿಸಿದರು.