


ಡೈಲಿ ವಾರ್ತೆ: 03/ಸೆ./2025


ಕುಂದಾಪುರ: ಹನಿ ಟ್ರ್ಯಾಪ್ ಸುಲಿಗೆ – ಮಹಿಳೆ ಸಹಿತ ಆರು ಮಂದಿಯ ಬಂಧನ

ಉಡುಪಿ: ವ್ಯಕ್ತಿಯೊಬ್ಬನನ್ನು ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ಆತನಿಗೆ ಹಲ್ಲೆಗೈದು ಸಾವಿರಾರು ರೂ. ಸುಲಿಗೆ ಮಾಡಿದ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಸಂದೀಪ್ ಕುಮಾರ್ ಎಂಬವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಂಧಿತರನ್ನು ಬೈಂದೂರು ನಾವುಂದ ಗ್ರಾಮದ ಸವದ್ ( 28), ಕುಂದಾಪುರ ಗುಲ್ವಾಡಿ ಗ್ರಾಮದ ಸೈಪುಲ್ಲಾ ( 38), ಕುಂದಾಪುರ ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್ ( 36), ಕುಂದಾಪುರ ಕುಂಭಾಶಿ ಗ್ರಾಮದ ಅಬ್ದುಲ್ ಸತ್ತಾರ್ ( 23), ಶಿವಮೊಗ್ಗ ಜಿಲ್ಲೆಯ ಹೊಸನಗರದ ಅಬ್ದುಲ್ ಅಜೀಜ್ ( 26) ಹಾಗೂ ಕುಂದಾಪುರ ಕೋಡಿ ನಿವಾಸಿ ಆಸ್ಮಾ (43) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ಕಾರುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಘಟನೆ ವಿವರ:
ಸಂದೀಪ್ ಕುಮಾರ್ ಎಂಬವರಿಗೆ ಮೂರು ತಿಂಗಳ ಹಿಂದೆ ಅಬ್ದುಲ್ ಸವಾದ್ ಎಂಬಾತ ಪರಿಚಯವಾಗಿದ್ದು, ಆತ ಆಸ್ಮಾನ ಎಂಬಾಕೆಯ ಪರಿಚಯ ಮಾಡಿಕೊಟ್ಟು ಮೊಬೈಲ್ ಸಂಖ್ಯೆ ನೀಡಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದನು.
ಅದರಂತೆ ಸಂದೀಪ್, ಆರೋಪಿ ಆಸ್ಮಾಳಿಗೆ ಕರೆಮಾಡಿದ್ದರು. ಆಕೆ ಸೆ.2ರಂದು ಸಂಜೆ 6.30ಕ್ಕೆ ಕುಂದಾಪುರದ ಮಲ್ನಾಡ್ ಪೆಟ್ರೋಲ್ ಬಂಕ್ ಬಳಿಯ ಆರ್ ಆರ್ ಪ್ಲಾಝಾ ಬಳಿ ಬರಲು ತಿಳಿಸಿದ್ದಳು. ಅದರಂತೆ ಸಂದೀಪ್ ಆಟೋ ರಿಕ್ಷಾದಲ್ಲಿ ಅಲ್ಲಿಗೆ ಹೋಗಿದ್ದರು. ಬಳಿಕ ಆರೋಪಿ ಆಸ್ಮಾ ಅವಳ ಮನೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಆಕೆ ಉಳಿದ ಆರೋಪಿಗಳನ್ನು ಕರೆ ಮಾಡಿ ಕರೆಯಿಸಿಕೊಂಡಿದ್ದು, 3 ಲಕ್ಷ ಹಣ ಕೊಟ್ಟು ಹೋಗಬೇಕೆಂದು ಚಾಕು ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾರೆ. ಆಗ ಸಂದೀಪ್ ಓಡಿ ಹೋಗಲು ಪ್ರಯತ್ನಿಸಿದಾಗ ಆರೋಪಿಗಳಾದ ಸವದ್, ಸೈಪುಲ್ಲಾ, ಮೊಹಮ್ಮದ್ ನಾಸೀರ್ ಶರೀಫ್ , ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಜೀಜ್ ಸೇರಿಕೊಂಡು ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿ ಕೈಯಿಂದ ಹಲ್ಲೆ ಮಾಡಿದ್ದಾರೆ. ರಾಡ್ ನಿಂದ ಎಡ ಭುಜ ಹಾಗೂ ಬೆನ್ನಿಗೆ ಹೊಡೆದು ಬಳಿಕ ಪ್ಯಾಂಟ್ ಜೇಬಿನಲ್ಲಿದ್ದ 6,200 ರೂಪಾಯಿನ್ನು ಬಲವಂತದಿಂದ ಕಸಿದುಕೊಂಡಿದ್ದಾರೆ. ಅಲ್ಲದೆ, ಇನ್ನೂ ಹಣ ನೀಡುವಂತೆ ಬೆದರಿಸಿದ್ದಾರೆ. ಹಣ ಇಲ್ಲ ಎಂದು ಹೇಳಿದಕ್ಕೆ, ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹುಗಿದು ಹಾಕುತ್ತೇವೆಂದು ಬೆದರಿಸಿ ಮತ್ತೆ ಕೈಯಿಂದ ಹೊಡೆದಿದ್ದಾರೆ. ಇದಕ್ಕೆ ಹೆದರಿ ಸೈಪುಲ್ಲಾ ಖಾತೆಗೆ 30 ಸಾವಿರ ಹಣ ಹಾಕಿದ್ದಾರೆ. ಆ ಬಳಿಕ ಬಲತ್ಕಾರವಾಗಿ ಎಟಿಎಂ ಕಾರ್ಡ್ ನ್ನು ಕಿತ್ತುಕೊಂಡು ಪಿನ್ ನಂಬ್ರ ಪಡೆದುಕೊಂಡು 40 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಸಂದೀಪ್ ದೂರಿನಲ್ಲಿ ತಿಳಿಸಿದ್ದಾರೆ.