


ಡೈಲಿ ವಾರ್ತೆ: 05/ಸೆ./2025


ಪ್ಲಾಸ್ಟಿಕ್ ಗನ್ ಹಿಡಿದ ಚಿನ್ನದಂಗಡಿ ದರೋಡೆ ಮಾಡಿದ್ದ ಗ್ಯಾಂಗ್ ಬಂಧನ
ನೆಲಮಂಗಲ: ಪ್ಲಾಸ್ಟಿಕ್ ಗನ್ ಹಿಡಿದು ಚಿನ್ನದ ಅಂಗಡಿಯಲ್ಲಿ ದರೋಡೆ ಮಾಡಿದ್ದ ಗ್ಯಾಂಗ್ ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಮೊಹಮ್ಮದ್ ರಫಿಕ್, ಮೊಹಮ್ಮದ್ ಇಬ್ತೇಕರ್, ರಂಶಾದ್ ಎಂದು ಗುರುತಿಸಲಾಗಿದೆ. ನಾಲ್ವರ ಪೈಕಿ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ, ರಾಜ್ಯದ ನಾನಾ ಜಿಲ್ಲೆ ಸೇರಿದಂತೆ ಹಲವೆಡೆ ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಕುಕೃತ್ಯಗಳು ಬೆಳಕಿಗೆ ಬಂದಿವೆ.
ಏನಿದು ದರೋಡೆ ಪ್ರಕರಣ?
ಜೂ.25 ರಂದು ಮಾಗಡಿ ರಸ್ತೆಯ ಮಾಚೋಹಳ್ಳಿಯಲ್ಲಿ ಜ್ಯುವೆಲರಿ ಶಾಪ್‌ಗೆ ಗ್ಯಾಂಗ್‌ವೊಂದು ನುಗ್ಗಿ ದರೋಡೆ ಮಾಡಿತ್ತು. ಪ್ಲಾಸ್ಟಿಕ್ ಗನ್ ಹಿಡಿದು ಅಂಗಡಿ ಮಾಲೀಕನನ್ನು ಬೆದರಿಸಿ ದರೋಡೆ ಮಾಡಲಾಗಿತ್ತು. 90 ಗ್ರಾಂ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಉಡುಪಿ, ಒಡಿಶಾ, ಮಂಗಳೂರು ಮೂಲದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 30 ಲಕ್ಷ ಬೆಲೆ ಬಾಳುವ 90 ಗ್ರಾಂ ಚಿನ್ನಾಭರಣ, ಎರಡು ಕಾರ್ ವಶಕ್ಕೆ ಪಡೆಯಲಾಗಿದೆ.