


ಡೈಲಿ ವಾರ್ತೆ: 05/ಸೆ./2025


ಉಡುಪಿ| ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಮೋಸ: 1 ಕೋಟಿ ರೂ. ಗೂ ಅಧಿಕ ಹಣ ಕಳೆದುಕೊಂಡ ವ್ಯಕ್ತಿ

ಉಡುಪಿ: ಆನ್‌ಲೈನ್ ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ಹೂಡಿಕೆ ಹೆಸರಿನಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ ಹಿರಿಯ ನಾಗರಿಕರೊಬ್ಬರಿಗೆ 1.32 ಕೋ. ರೂ. ಆನ್‌ಲೈನ್ ಮೂಲಕ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆನ್ರಿ ಡಿ’ಅಲ್ಮೇಡಾ (69) ಹಣ ಕಳೆದುಕೊಂಡವರು.
ಹೆನ್ರಿ ಡಿ’ಅಲ್ಮೇಡಾ ಅವರು ಜು. 19ರಂದು ಫೇಸ್‌ಬುಕ್‌ನಲ್ಲಿ ಇನ್ವೆಸ್ಟ್‌ಮೆಂಟ್ ಟ್ರೇಡಿಂಗ್ ಮಾಡುವ ಬಗ್ಗೆ ಜಾಹೀರಾತೊಂದು ಕಾಣಿಸಿದ್ದು ಅದನ್ನು ತೆರೆದು ನೋಡಿದ್ದರು. ಬಳಿಕ ಹೆನ್ರಿ ಅವರ ವಾಟ್ಸ್‌ಆ್ಯಪ್‌ಗೆ ಟ್ರೇಡಿಂಗ್ ಹೂಡಿಕೆ ಮಾಡುವಂತೆ ಸಂದೇಶ ಬಂದಿತ್ತು. ಅಂಕಿತಾ ಘೋಷ್ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಹೂಡಿಕೆ ಮಾಡುವ ಬಗ್ಗೆ ಮಾಹಿತಿ ನೀಡಿ ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರ್ಪಡೆ ಮಾಡಿದ್ದಳು.
ಗ್ರೂಪ್‌ನಲ್ಲಿನ ವಿವಿಧ ನಂಬರ್‌ಗಳಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ಗಳಿಸಬಹುದೆಂದು ಸಂದೇಶಗಳಿದ್ದು, ಅದನ್ನು ನಂಬಿದ ಹೆನ್ರಿ ಅವರು ಜು. 22ರಿಂದ ಸೆ. 1ರ ವರೆಗೆ ಹಂತ ಹಂತವಾಗಿ ಒಟ್ಟು 1,32, 90,000 ರೂ. ಹಣ ಹೂಡಿಕೆ ಮಾಡಿದ್ದಾರೆ. ಆದರೆ ಹೆನ್ರಿ ಡಿ’ಅಲ್ಮೇಡಾ ಅವರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ಆರೋಪಿಗಳು ನೀಡದೇ ನಂಬಿಸಿ ಮೋಸ ಮಾಡಿದ್ದಾಗಿ ದೂರಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.