


ಡೈಲಿ ವಾರ್ತೆ: 07/ಸೆ./2025


ಚಾಮರಾಜನಗರ: ಲಾರಿ, ಕಾರು, ದ್ವಿಚಕ್ರ ವಾಹನ ಮಧ್ಯೆ ಸರಣಿ ಅಪಘಾತ, ನಾಲ್ವರು ಬಾಲಕರ ಸಾವು

ಚಾಮರಾಜನಗರ: ನಗರದ ಗಾಳಿಪುರ ಬೈಪಾಸ್ನಲ್ಲಿ ಶನಿವಾರ ಸಂಭವಿಸಿದ ಲಾರಿ, ಕಾರು ಮತ್ತು ದ್ವಿಚಕ್ರ ವಾಹನ ನಡುವಿನ ಸರಣಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ ಆಗಿದೆ. ಮೆರಾನ್, ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಮೃತರು.
ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರವಾಗಲಿದೆ. ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಣಿ ಅಪಘಾತದಲ್ಲಿ 10 ವರ್ಷದ ಮೆರಾನ್ ನಿನ್ನೆ ಸ್ಥಳದಲ್ಲೇ ಮೃತಪಟ್ಟಿದ್ದ. ಮೂವರ ಸ್ಥಿತಿ ಗಂಭೀರವಾಗಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಮೃತಪಟ್ಟಿದ್ದಾರೆ.
ಘಟನೆ ವಿವರ:
ಈದ್ ಹಬ್ಬ ಸಂಭ್ರಮ ಮನೆ ಮಾಡಿತ್ತು. ಎಲ್ಲರೂ ನಮಾಜ್ ಮಾಡ್ಕೊಂಡು ಹಬ್ಬವನ್ನ ಆಚರಿಸಿದರು. ಶನಿವಾರವಾದ ಕಾರಣ ಶಾಲೆಗೆ ಹೋಗಿರ್ಲಿಲ್ಲ. ಸೋಮವಾರ ಶಾಲೆಗೆ ಹೋಗೋಣ ಅಂತ ಡಿಸೈಡ್ ಮಾಡಿದ್ದರು ಮೆರಾನ್ ಹಾಗೂ ಆತನ ಸಹೋದರ ಹಾಗೂ ಇಬ್ಬರು ಸ್ನೇಹಿತರು.
ಒಟ್ಟು ನಾಲ್ವರು ಟಿವಿಎಸ್ ಎಕ್ಸ್ ಎಲ್ ಬೈಕ್ ತೆಗೆದುಕೊಂಡು ಗಾಳಿಪುರದ ಬಳಿ ಇರುವ ಔಟರ್ ರಿಂಗ್ ರಸ್ತೆಗೆ ಬಂದಿದ್ದು, ಹೈವೆಯಲ್ಲಿ ವೇಗವಾಗಿ ಬರ್ತಾಯಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರು. ಬೈಕ್ ಹಿಂದೆಯೇ ಇದ್ದ ಕಾರು ಕೂಡ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ನಾಲ್ವರು ಸಹ ಹೆಲ್ಮೆಟ್ ಹಾಕಿರ್ಲಿಲ್ಲ, ಪರಿಣಾಮ ನಾಲ್ವರಿಗೂ ಹೆಡ್ ಇಂಜ್ಯುರಿಯಾಗಿ ಮೃತಪಟ್ಟಿದ್ದಾರೆ.
ಅದೇನೆ ಹೇಳಿ ಅಪ್ರಾಪ್ತರ ಕೈಗೆ ಬೈಕ್ ನೀಡಿದ್ದು ಪೋಷಕರ ತಪ್ಪು. ಇತ್ತ ಒಂದೇ ಬೈಕ್ನಲ್ಲಿ ಹುಡುಗಾಟ ಆಡಲು ಹೋಗಿ ಈಗ ನಾಲ್ಕು ಜೀವಗಳು ಬಲಿಯಾಗಿದ್ದು ಮಾತ್ರ ದುರಂತವೇ ಸರಿ.