ಡೈಲಿ ವಾರ್ತೆ: 09/ಸೆ./2025

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಸಿಎಂ ಹಾಗೂ ಗೃಹ ಸಚಿವರಿಗೆ ಕೋಟ ನಾಗೇಂದ್ರ ಪುತ್ರನ್ ಮನವಿ

ಬೆಂಗಳೂರು: ಕೊರೊನೋ ಸಂದರ್ಭದಿಂದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಮಾಡದೇ ಇರುವುದರಿಂದ ಮುಂದೆ ನೇಮಕಾತಿ ಮಾಡುವ ಸಂದರ್ಭದಲ್ಲಿ ವಯೋಮಿತಿ (33) ವರ್ಷಕ್ಕೆ ಏರಿಸುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಮನವಿ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ 30 ವರ್ಷ ನಿಗದಿ ಯಾಗಿತ್ತು.‌ಆ ಸಮಯದಲ್ಲಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕಾನ್ಸ್‌ಟೇಬಲ್
ನೇಮಕಾತಿ ಮಾಡುವಾಗ ವಯೋಮಿತಿ (33)ವರ್ಷಕ್ಕೆ ಏರಿಕೆ ಮಾಡಬೇಕು ಎಂದು ಬಿಜೆಪಿ ಸರಕಾರಕ್ಕೆ ಒತ್ತಾಯಿಸಿದ್ದರು. ಆದರೆ ಅದು ಬಿಜೆಪಿ ಸರಕಾರದ ಅವಧಿಯಲ್ಲಿ ಸಾಧ್ಯವಾಗದೆ ಉಳಿದಿತ್ತು.

ಈಗ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು ಮತ್ತೆ ಪುನಃ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮುಖ್ಯಮಂತ್ರಿ ಅವರು ಹಾಗೂ ಗೃಹಸಚಿವರು ಈ ಬಗ್ಗೆ ಗಮನ ಹರಿಸಿ ಈ ಬಾರಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಮಾಡುವ ಸಂದರ್ಭದಲ್ಲಿ ವಯೋಮಿತಿ (33)ವರ್ಷಕ್ಕೆ ಏರಿಕೆ ಮಾಡಬೇಕು ಹಾಗೂ ಕರಾವಳಿ ಭಾಗದ ಯುವಕರಿಗೆ ಹಾಗೂ ಯುವತಿಯರಿಗೆ ಹೆಚ್ಚು ಪೊಲೀಸ್ ಇಲಾಖೆಯಲ್ಲಿ ಉದ್ಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ನಾಗೇಂದ್ರ ಪುತ್ರನ್ ಆಗ್ರಹಿಸಿ ಮನವಿ ನೀಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಸೇರಲು ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದರಾಗಿದ್ದು ಕೊರೊನಾ ಕಾರಣ ಎಲ್ಲವೂ ಕೂಡ ರದ್ದಾಗಿತ್ತು. ವಿದ್ಯಾರ್ಥಿಗಳ ವಯೋಮಿತಿಯಲ್ಲಿ ಏರುಪೇರು ಆಗಿರುವುದರಿಂದ ವಯಸ್ಸಿನ ವಯೋಮಿತಿಯನ್ನು (33) ವರ್ಷ ಕ್ಕೆ ಏರಿಕೆ ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ.

ಎಸ್ಸಿ /ಎಸ್ಟಿ, ಒಬಿಸಿ, ಸಾಮಾನ್ಯ, ಎಲ್ಲರಿಗೂ ಕೂಡ ವಂದೇ ಮಾನದಂಡದಲ್ಲಿ ವಯೋಮಿತಿ ಇರಿಸಿ ಪರಿಶೀಲಿಸಿ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ.