


ಡೈಲಿ ವಾರ್ತೆ: 09/ಸೆ./2025


ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಜಟಾಪಟಿ: ಸದಸ್ಯರಿಗೆ ನಿಂದನೆ, ಸದನದ ಬಾವಿಗಿಳಿದ ಪ್ರತಿಭಟಿಸಿದ ವಿಪಕ್ಷ ನಾಯಕ – ಶ್ರೀನಿವಾಸ ಅಮೀನ್

ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಿಗೆ ನಿಂದನೆ ಅಥವಾ ಅವಾಚ್ಯ ಶಬ್ದಗಳಿಂದ ಗಲಾಟೆ ನಡೆದಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಸಾಲಿಗ್ರಾಮ ಪಟ್ಟಣಪಂಚಾಯತ್ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಖಡಕ್ ಆಗಿ ಪ್ರಶ್ನಿಸಿದ ಘಟನೆ ಮಂಗಳವಾರ ನಡಯಿತು.

ಮಂಗಳವಾರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿಯನ್ನು ಕೇಳಿದರು.

ಈ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ ಸಮರ ಏರ್ಪಟ್ಟಿತು. ಈ ಬಗ್ಗೆ ಅಧ್ಯಕ್ಷರು ಅಥವಾ ಮುಖ್ಯಾಧಿಕಾರಿ ಸ್ಪಷ್ಟನೆ ನೀಡಬೇಕು, ಪಟ್ಟಣಪಂಚಾಯತ್ ಸದಸ್ಯರಾಗಿ ನಮ್ಮಗೆ ಬೆಲೆ ಇಲ್ಲವೇ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಿ ಹಕ್ಕುಚ್ಯುತಿ ಮಂಡಿಸುತ್ತಿದ್ದೇನೆ ಎಂದು ಶ್ರೀನಿವಾಸ ಅಮೀನ್ ಆಕ್ರೋಶ ಹೊರಹಾಕಿ ಮನವಿ ಮಾಡಿದರು.
ಇದಕ್ಕೊಪ್ಪದ ಆಡಳಿತ ಪಕ್ಷದ ನಾಯಕರು ಆ ರೀತಿಯ ಯಾವುದೇ ಪ್ರಸಂಗಳು ನಡೆದಿಲ್ಲ ಬದಲಾಗಿ ನೀವೆಕೆ ಈ ರೀತಿ ಸಮಸ್ಯೆ ಸೃಷ್ಠಿಸುತ್ತಿದ್ದಿರಿ ಎಂದು ಆಡಳಿತ ಪಕ್ಷದ ರಾಜು ಪೂಜಾರಿ ಗರಂ ಆಗಿ ಕೇಳಿದರು.
ಇದರಿಂದ ಕೋಪಗೊಂಡ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಸದನದ ಭಾವಿಗಿಳಿದು ಧರಣ ಕುಳಿತು ನನಗೆ ನನ್ನ ಆಯ್ಕೆಯಾದ ಪಕ್ಷದ ಸದಸ್ಯರ ಬಗ್ಗೆ ಮಾತ್ರ ಕಾಳಜಿಯಲ್ಲ ಬದಲಾಗಿ ಪಟ್ಟಣಪಂಚಾಯತ್ ಯಾವುದೇ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಸಂಗಗಳು ಉದ್ಭವಿದಂತೆ ಎಚ್ಚರಿಕೆ ವಹಿಸುವ ಅಗತ್ಯತೆಯನ್ನು ಮನದಟ್ಟು ಮಾಡಿದರು.
ಈ ಹಿನ್ನಲ್ಲೆಯಲ್ಲಿ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಶ್ಯಾಮಸುಂದರ್ ನಾಯರಿ ಈ ರೀತಿಯಾದರೆ ಖಂಡನಾ ನಿರ್ಣಯ ಕೈಗೊಳ್ಳೋಣ ಎಂದರು.
ಈ ಬಗ್ಗೆ ಮತ್ತಷ್ಟು ಚರ್ಚೆ ಏರ್ಪಟ್ಟ ಹಿನ್ನಲ್ಲೆಯಲ್ಲಿ ಆಡಳಿತ ಪಕ್ಷದ ಸುಲತಾ ಹೆಗ್ಡೆ ಮಾತನಾಡಿ ಘಟನೆ ನಡೆದದ್ದು ಸತ್ಯ ಈ ಬಗ್ಗೆ ಅಧ್ಯಕ್ಷರ ಗಮನಕ್ಕಿದೆ ಕೌನ್ಸಿಲ್ ಸಭಾಂಗಣದಲ್ಲೆ ಈ ಪ್ರಕರಣ ನಡೆದಿದೆ, ಇದರ ಬಗ್ಗೆ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ಮಾತುಕತೆ ನಡೆದು ಸಮಸ್ಯೆ ಬಗೆಹರಿಸಲಾಗಿದೆ. ಅದು ಸಹ ಒರ್ವ ಮಹಿಳಾ ಸದಸ್ಯರೊರ್ವರನ್ನೆ ಟಾರ್ಗೆಟ್ ಮಾಡಲಾಗಿದೆ ಇಂತಹ ಘಟನೆಗಳು ಮುಂದೆ ನಡೆಯದಂತೆ ಪಟ್ಟಣಪಂಚಾಯತ್ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಇದರೊಂದಿಗೆ ಸಭೆಗೆ ಮಾಹಿತಿ ನೀಡಿದ ಮುಖ್ಯಾಧಿಕಾರಿ ಅಜೇಯ ಭಂಡಾರ್ಕರ್ ಕೌನ್ಸಿಲರ್ ರಕ್ಷಣೆಯ ಬಗ್ಗೆ ಕಠಿಣ ಕ್ರಮಗಳನ್ನು ಸಭೆ ನಿರ್ಣಯದ ಮೂಲಕ ಕೈಗೊಳ್ಳಲಿದೆ ಎಂದರು.
ಪಟ್ಟಣಪಂಚಾಯತ್ ಘನ ಹಾಗೂ ದ್ರವ ತ್ಯಾಜ್ಯ ಘಟಕ ಸ್ಥಳ ಖರೀದಿಯಲ್ಲಿ ಸದಸ್ಯರುಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಜನಸಾಮಾನ್ಯರಲ್ಲಿರುವ ಬಗ್ಗೆ ಉಲ್ಲೇಖಿಸಿದ ಶ್ರೀನಿವಾಸ ಅಮೀನ್ ಹಿಂದಿನ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಸ್ಥಳ ಖರೀದಿಸಲಾಗಿದೆ. ಇದರಲ್ಲಿ ಸದಸ್ಯರು ಯಾರೂ ಕೂಡಾ ಭಾಗಿಯಾಗಿಲ್ಲ ಅಲ್ಲದೆ ಅತಿ ಹೆಚ್ಚು ದರ ನೀಡಿ ಖರೀದಿಸಲಾಗಿದೆ ಈ ಪ್ರಕರಣ ಈಗಾಗಲೇ ಲೋಕಾಯುಕ್ತದಲ್ಲಿದೆ ಅದೇ ರೀತಿ ಜಿಲ್ಲಾ ಮಟ್ಟದ ಉನ್ನತ ಪಾರದರ್ಶಕ ತನಿಖೆ ಅಗತ್ಯತೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.
ಮುಖ್ಯಾಧಿಕಾರಿ ಮಾಹಿತಿ ನೀಡಿ ಪಟ್ಟಣಪಂಚಾಯತ್ ಅಧ್ಯಕ್ಷರ ಮೂಲಕ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸಲು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪಟ್ಟಣಪಂಚಾಯತ್ ಆಡಳಿತ ಪಕ್ಷದ ಶ್ಯಾಮಸುಂದರ್ ನಾಯರಿ ಮಾತನಾಡಿ ಸಾಲಿಗ್ರಾಮ ಒಳ ಪೇಟೆ ಅಗಲಿಕರಣದ ಏನೇನು ಪ್ರಕ್ರಿಯೆ ಪೂರ್ಣಗೊಂಡಿದೆ. ಇದರ ಬಗ್ಗೆ ವಿಳಂಬ ನೀತಿ ಸರಿಯಲ್ಲ ವಿಳಂಬವಾದರೆ ಕೆಲವರು ಕಾನೂನುಹೋರಾಟಕ್ಕೆ ಇಳಿಯುವ ಸಾಧ್ಯತೆ ಇರುತ್ತದೆ ಪಟ್ಟಣಪಂಚಾಯತ್ ಸುವರ್ಣ ಮಹೋತ್ಸವದ ಒಳಗಡೆ ಅಗಲಿಕರಣವಾಗಲಿ ಈ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳಿ ಎಂದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಅಗಲಿಕರಣದ ಬಗ್ಗೆ ಈಗಾಗಲೇ ಮೊದಲ ಹಂತದ ಕಾರ್ಯಾಚರಣೆ ಕೈಗೊಂಡಿದ್ದೇವೆ ಮುಂದಿನ ಹಂತದ ಕ್ರಮಗಳನ್ನು ಕಂದಾಯ ಇಲಾಖಾ ವ್ಯಾಪ್ತಿಯ ತಹಶಿಲ್ದಾರ್ ಸಮ್ಮುಖದಲ್ಲಿ ಆಗಬೇಕಿದೆ ಈ ಕುರಿತಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ ಈ ಹಿನ್ನಲ್ಲೆಯಲ್ಲಿ ಪಟ್ಟಣಪಂಚಾಯತ್ ಮುಂಭಾಗವಿರುವ ಆಟೋ ನಿಲ್ದಾಣವನ್ನು ಸುವರ್ಣ ಮಹೋತ್ಸವದ ಒಳಗಡೆ ತೆರವುಗೊಳಿಸಿ ಅವರಿಗೆ ಬೇರೆಡೆ ಸ್ಥಳ ನೀಡಿ ಪಟ್ಟಣ ಪಂಚಾಯತ್ ಮುಂಭಾಗ ಸ್ವಚ್ಛ ಪಾರ್ಕಿಂಗ್ ನತ್ತ ಕ್ರಮ ಸೇರಿದಂತೆ ಈ ಪರಿಸರದ ಪ್ರಮುಖ ಗಣ್ಯರ ಪುತ್ತಳಿಯನ್ನು ರಚಿಸಲು ಶ್ರೀನಿವಾಸ ಅಮೀನ್ ಸಭೆಗೆ ಸಲಹೆ ನೀಡಿದರು. ಈ ಬಗ್ಗೆ ಸಭೆ ನಡೆಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ದಾರಿದೀಪ ಸಮರ್ಪಕ ಗೊಳಿಸಿ..
ಆಡಳಿತ ಪಕ್ಷದ ರಾಜು ಪೂಜಾರಿ ಮಾತನಾಡಿ ಪ್ರತಿ ಬಾರಿ ಪಟ್ಟಣಪಂಚಾಯತ್ ದಾರಿ ದೀಪ ನಿರ್ವಹಣೆಯಲ್ಲಿ ಲೋಪ ಇದೆ ಇದರ ಬಗ್ಗೆ ಅಧಿಕಾರಿ ವರ್ಗ ಅಥವಾ ಗುತ್ತಿಗೆದಾರ ನಿರ್ಲಕ್ಷ ತೋರುತ್ತಿದ್ದಾರೆ ಹಾಗಾದರೆ ಪ್ರತಿ ಸಭೆಯಲ್ಲಿ ಇದರ ಕುರಿತು ಗೋಳಿಡುವ ಪ್ರಶ್ನೆ ಉದ್ಭವಿಸಿದೆ ಎಂದರು.
ಈ ಬಗ್ಗೆ ಮುಖ್ಯಾಧಿಕಾರಿ ಪಟ್ಟಣಪಂಚಾಯತ್ ಇಂಜಿನಿಯರ್‌ರವರನ್ನು ಪ್ರಶ್ನಿಸಿ ಏನು ಕ್ರಮಕೈಗೊಳ್ಳುತ್ತಿದಿರಿ ಪ್ರತಿಬಾರಿ ಸಮಸ್ಯೆ ಎದುರಿಸುವುದಾದರೆ ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸುತ್ತೇನೆ ಎಂದು ಗರಂ ಆಗಿ ಉತ್ತರಿಸಿ ದಾರಿದೀಪ ಸಮರ್ಪಕಗೊಳಿಸುವ ಭರವಸೆ ನೀಡಿದರು.
ಬೀದಿ ನಾಯಿಗಳಿಗೆ ಕಡಿವಾಣ, ಲಸಿಕೆ ಕ್ರಮಕೈಗೊಳ್ಳಿ
ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಅದರ ಸಂತನಾ ಹರಣ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದಿರಾ, ಲಸಿಕೆ ನೀಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿ ಎಂದು ಸದಸ್ಯರಾದ ಶ್ಯಾಮಸುಂದರ್ ನಾಯರಿ ಹೇಳಿದರಲ್ಲದೆ ಇನೊರ್ವ ಸದಸ್ಯ ರಾಜು ಪೂಜಾರಿ ಮಾತನಾಡಿ ಮನೆಯ ಸಾಕು ನಾಯಿಗಳನ್ನು ಹೊರ ಬಿಡದಂತೆ ಕ್ರಮಕೈಗೊಳ್ಳಲು ಸಭೆಗೆ ತಿಳಿಸಿದರು.
ಈ ಬಗ್ಗೆ ಮುಖ್ಯಾಧಿಕಾರಿ ಮಾತನಾಡಿ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಈಗಾಗಲೇ 2ಲಕ್ಷ ರೂ ಕಾಯ್ದಿರಿಸಲಾಗಿದೆ ಮುಂದಿನ ದಿನಗಳಲ್ಲಿ ಪಶು ಇಲಾಖೆಯ ಮೂಲಕ ಇದರ ಕಾರ್ಯಕ್ರಮ ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜಾ ಪೂಜಾರಿ,ಸ್ಥಾಯೀ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ,ಮೆಸ್ಕಾಂ, ಕಂದಾಯ ಇಲಾಖಾಧಿಕಾರಿ ಉಪಸ್ಥಿತರಿದ್ದರು.