


ಡೈಲಿ ವಾರ್ತೆ: 10/ಸೆ./2025


ಸುಜ್ಞಾನ ಪಿಯು ಕಾಲೇಜಿನಲ್ಲಿ ಯಶಸ್ವಿ ಕಬಡ್ಡಿ ಪಂದ್ಯಾಟ
ಕ್ರೀಡೆಯಲ್ಲಿ ಬದುಕು ಕಟ್ಟಿಕೊಳ್ಳಲು ಅಪಾರ ಅವಕಾಶ-ರಮೇಶ್ ಶೆಟ್ಟಿ

ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸುಜ್ಞಾನ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಕಬಡ್ಡಿ ಪಂದ್ಯಾಟವು ಬುಧವಾರ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಕಾಲೇಜಿನ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಅವರು ಮಾತನಾಡಿ, ಕ್ರೀಡೆಯನ್ನು ಪ್ರೀತಿಸಿ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು; .ಇತ್ತೀಚೆಗೆ ಕ್ರೀಡಾಂಗಣದಲ್ಲಿ ಆಡುವವರಿಗಿಂತ ಮೊಬೈಲ್‌ನಲ್ಲಿಯೇ ಆಡುವವರ ಸಂಖ್ಯೆ ಹೆಚ್ಚಾಗಿರುವುದು ಕಳವಳಕಾರಿ ಸಂಗತಿಯಾಗಿದೆ; ಶಾರೀರಿಕ ಕ್ರೀಡೆಯಿಂದ ವ್ಯಕ್ತಿಯ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಹೇಳಿದರು.
ಮಹಾತ್ಮಗಾಂಧಿ ಪ್ರೌಢಶಾಲೆ ಸಾಬ್ರಕಟ್ಟೆಯ ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ, “ಸೋಲು, ಗೆಲುವಿನ ಬಗ್ಗೆ ಗಮನ ಹರಿಸದೆ ಕ್ರೀಡೆಯಲ್ಲಿ ಖುಷಿಯಿಂದ ತೊಡಗಿಸಿಕೊಳ್ಳಿ. ಕ್ರೀಡೆಯಲ್ಲಿ ಗೆದ್ದಾಗ ಅಹಂಕಾರ ಪಡದೇ ಸೋತಾಗ ನಿರಾಸಕ್ತಿ ಹೊಂದದೆ ಭಾಗವಹಿಸುವಿಕೆಯ ಬಗ್ಗೆ ಗಮನಹರಿಸಿ” ಎಂದು ಕಿವಿಮಾತು ನುಡಿದರು.
ದೇಶೀ ಕ್ರೀಡೆಯಾದ ಕಬಡ್ಡಿಯು ದೇಹದ ಶಕ್ತಿ ಹಾಗೂ ಮನೋಬಲ ಎರಡನ್ನೂ ಪ್ರತಿನಿಧಿಸುವ ಆಟವಾಗಿದೆ. ಕ್ರೀಡಾ ಸ್ಫೂರ್ತಿಯೊಂದಿಗೆ ಆಟವಾಡುವುದನ್ನು ರೂಢಿಸಿಕೊಂಡಾಗ ಮೈಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದು ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅವರು, “ಈಗ ಕ್ರೀಡೆಯಲ್ಲಿಯೂ ಬದುಕು ಕಟ್ಟಿಕೊಳ್ಳಲು ಅಪಾರ ಅವಕಾಶಗಳಿವೆ. ಸೋಲನ್ನು ಯಾವುದೇ ಕಾರಣಕ್ಕೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಸೋಲೇ ಗೆಲುವಿನ ಸೋಪಾನ ಎಂಬುದನ್ನು ಮನವರಿಕೆ ಮಾಡಿಕೊಂಡು ತಮಗೆ ಆಸಕ್ತಿಯಿರುವ ಕ್ರೀಡೆಯಲ್ಲಿ ಕೌಶಲಗಳನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ವಿವರಿಸಿದರು.
ಬಾಲಕರ ವಿಭಾಗದಲ್ಲಿ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಪ್ರಥಮ, ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ ದ್ವಿತೀಯ ಸ್ಥಾನವನ್ನು, ಬಾಲಕಿಯರ ವಿಭಾಗದಲ್ಲಿ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಪ್ರಥಮ, ಸರ್ಕಾರಿ ಪಿಯು ಕಾಲೇಜು ಕುಂದಾಪುರ ದ್ವಿತೀಯ ಸ್ಥಾನ ಗಳಿಸಿ ಗೆಲುವಿನ ನಗೆ ಬೀರಿದವು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಪದವಿ ಮತ್ತು ಪದವಿ ಪೂರ್ವ ನೌಕರರ ಸಂಘದ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕಿನ ಕ್ರೀಡಾ ಸಂಯೋಜಕ ರಾಮ ಶೆಟ್ಟಿ, ಉಪಸ್ಥಿತರಿದ್ದರು. ಕೊಲ್ಲೂರಿನ ಮೂಕಾಂಬಿಕ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಶೆಟ್ಟಿ ನಿರೂಪಿಸಿದರು, ಸಂಸ್ಥೆಯ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ಸ್ವಾಗತಿಸಿದರು, ದೈಹಿಕ ಶಿಕ್ಷಣ ನಿರ್ದೇಶಕಿ ಜಯಲತಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ವಂದಿಸಿದರು.