


ಡೈಲಿ ವಾರ್ತೆ: 12/ಸೆ./2025


ಅಜೆಕಾರು: ಮಹಿಳೆಯೊಬ್ಬರ ಚೈನ್ ಕಳ್ಳತನ ಪ್ರಕರಣ – ಆರೋಪಿಯ ಬಂಧನ

ಅಜೆಕಾರು : ಉಡುಪಿ ಜಿಲ್ಲೆಯ ಅಜೆಕಾರು ಸಮೀಪ ಮಹಿಳೆಯೊಬ್ಬರ ಕುತ್ತಿಗೆಗೆ ಕೈ ಹಾಕಿ ಚೈನ್ ಕಳ್ಳತನ ಪ್ರಕರಣ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸುನಿಲ್ ರಮೇಶ್ ಲಮಾಣಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯನ್ನು ಅಜೆಕಾರ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸೆ. 9 ರಂದ ಸುಮಾರು 4:30 ಗಂಟೆಗೆ ಪಿರ್ಯಾದಿ ಕುಮುದಾ ಶೆಟ್ಟಿ (80) ಹೊಸಮನೆ, ಮುಳ್ಕಾಡು ಎಳ್ಳಾರೆ ಗ್ರಾಮ,ಕಾರ್ಕಳ ಇವರು ತಮ್ಮ ಮನೆಯ ಅಂಗಳದಲ್ಲಿ ಕುಳಿತುಕೊಂಡಿರುವ ಸಮಯ ಸುಮಾರು 35-40 ವರ್ಷದ ಯಾರೋ ಅಪರಿಚಿತ ವ್ಯಕ್ತಿ ಅವರ ಬಳಿ ಬಂದು “ತಾನು ಕಾರ್ಕಳದ ಸೂಪರ್ ವೈಸರ್ ಎಂದು ಹೇಳಿ ಇಲ್ಲಿ ಹತ್ತಿರ ಮನೆ ಉಂಟಾ, ನಿಮ್ಮ ಮನೆಯಲ್ಲಿ ಸಿಸಿ ಕ್ಯಾಮರಾ ಉಂಟಾ” ಎಂದು ಇತ್ಯಾದಿ ವಿಚಾರಿಸಿ ಸ್ವಲ್ಪ ಸಮಯ ಅಲ್ಲಿಯೇ ಕುಳಿತು ಸಂಜೆ ಸುಮಾರು 6 ಗಂಟೆ ಆಗುತ್ತಿದ್ದಂತೆ ಆತನು ಕುಮುದಾರ ಹತ್ತಿರ ಬಂದು ಒಮ್ಮೆಲೇ ಬಲತ್ಕಾರವಾಗಿ ಅವರ ಕುತ್ತಿಗೆಗೆ ಕೈ ಹಾಕಿ ಅವರನ್ನು ನೆಲಕ್ಕೆ ದೂಡಿ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ರೋಪ್ ಚೈನನ್ನು ಕಿತ್ತುಕೊಂಡು ಓಡಿ ಹೋಗಿರುತ್ತಾನೆ. ಪಿರ್ಯಾದಿದಾರರು ನೆಲಕ್ಕೆ ಬಿದ್ದಿದ್ದು ನೆಲಕ್ಕೆ ಬಿದ್ದ ಪರಿಣಾಮ ಅವರ ಹಣೆ,ತಲೆ,ಬಲ ಕೈ ಮತ್ತು ಕಾಲಿಗೆ ಗಾಯವಾಗಿದ್ದು, ಸ್ವಲ್ಪ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಸತೀಶ್ ಪೂಜಾರಿಯವರು ಪಿರ್ಯಾದಿದಾರರನ್ನು ಕಾರ್ಕಳದ TMA PAI ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ. ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಕುತ್ತಿಗೆಯಿಂದ ಕಿತ್ತುಕೊಂಡು ಹೋದ ಚಿನ್ನದ ರೋಪ್ ಚೈನಿನ ಅಂದಾಜು ಬೆಲೆ 1,75,000/- ಆಗಬಹುದಾಗಿದೆ ಎಂದು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 27/2025 ಕಲಂ: 329 (3),309 (4) BNS 2023ರಂತೆ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆ ಕೈಗೆತ್ತಿಗೊಂಡ ಸಿಪಿಐ ಕಾರ್ಕಳ ಡಿ. ಮಂಜಪ್ಪ ನೇತೃತ್ವದಲ್ಲಿ ಅಜೆಕಾರು ಪಿಎಸ್‌ಐ ಮಹೇಶ್ ಹಾಗೂ ಸಿಬ್ಬಂದಿಯವರ ತಂಡ ಆರೋಪಿ ಸುನಿಲ್ ರಮೇಶ್ ಲಮಾಣಿ(29), ತಂದೆ : ರಮೇಶ್ ಲಮಾಣಿ, ಗೊರವನ ಕೊಳ್ಳ, ಸವದತ್ತಿ ತಾಲೂಕು, ಬೆಳಗಾವಿ ಎಂಬಾತನನ್ನು ಬಂಧಿಸಿ ಆತನಿಂದ ಕಳವು ಮಾಡಲಾದ ಚಿನ್ನದ ರೋಪ್ ಚೈನನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.