ಡೈಲಿ ವಾರ್ತೆ: 13/ಸೆ./2025

ಕ್ಯಾಂಟರ್, ಆಟೋ ಹಾಗೂ ಕಾರು ನಡುವೆ ಸರಣಿ ಅಪಘಾತ – ಇಬ್ಬರು ಸಾವು, ದುರಂತದಲ್ಲಿ ಗರ್ಭಿಣಿ ಜಸ್ಟ್​​ ಮಿಸ್​​!

ಬೆಂಗಳೂರು: ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ಗಣಪತಿ ಮೆರವಣಿಗೆ ವೇಳೆ ಟ್ರಕ್ ಹರಿದು ವಿದ್ಯಾರ್ಥಿಗಳು ಸೇರಿ 9 ಜನರು ಸಾವನ್ನಪ್ಪಿದ್ದಾರೆ.
ಈ ದುರಂತ ಬೆನ್ನಲ್ಲೆ ಇತ್ತ ಬೆಂಗಳೂರಿನ ಸುಮ್ಮನಹಳ್ಳಿ ಜಂಕ್ಷನ್ ರಸ್ತೆಯಲ್ಲಿ ಆಟೋ ಮತ್ತು ಕಾರಿಗೆ ಕ್ಯಾಂಟರ್​​ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಕಾಮಾಕ್ಷಿ ಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಟೋದಲ್ಲಿದ್ದ ಡಿ.ಯೇಸು, ಜೆನಿಫರ್ ಮೃತರು. ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಬ್ರೇಕ್ ಫೇಲ್ಯೂರ್ ಆಗಿ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಕ್ಯಾಂಟರ್​​​ ಡಿಕ್ಕಿಯಾದ ರಭಸಕ್ಕೆ ಆಟೋ ಎರಡು ತುಂಡಾಗಿದೆ. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ದುರಂತದಲ್ಲಿ ಇಡೀ ಕುಟುಂಬ ಪಾರು:
ದುರಂತದಲ್ಲಿ ಅದೃಷ್ಟವಶಾತ್ ಗರ್ಭಿಣಿ ಹಾಗೂ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಗರ್ಭಿಣಿ ಪತ್ನಿ ಮತ್ತು 3 ವರ್ಷದ ಮಗುವನ್ನು ವಿಜಯ್ ಎಂಬುವವರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದೆ.

ಕಾರು ಚಾಲಕ ವಿಜಯ್ ಹೇಳಿದ್ದಿಷ್ಟು
ಅಪಘಾತದಲ್ಲಿ ಜಖಂಗೊಂಡ ರಿಟ್ಜ್ ಕಾರು ಚಾಲಕ ವಿಜಯ್ ಪ್ರತಿಕ್ರಿಯಿಸಿದ್ದು, ನನ್ನ ಪತ್ನಿ ಗರ್ಭಿಣಿ, ಬ್ಲಡ್ ಚೆಕಪ್​​ಗಾಗಿ ಆಸ್ಪತ್ರೆಗೆ ಹೊರಟಿದ್ದೆ. ಪೂಜಾ ಕಲ್ಯಾಣ ಮಂಟಪ ರಸ್ತೆಯಿಂದ ಲಾರಿ ವೇಗವಾಗಿ ಬಂತು. ಕಣ್ಣು ಮುಂದೆಯೇ ಆಟೋಗೆ ಡಿಕ್ಕಿ ಹೊಡೆದಿದೆ. ನಂತರ ನನ್ನ ಕಾರಿಗೆ ಡಿಕ್ಕಿ ಹೊಡೆದಿದೆ. ನಾನು ಕೂಡಲೇ ಲೆಫ್ಟ್ ಸೈಡ್​ಗೆ ತೆಗೆದುಕೊಂಡು ಪಾರಾದೆ. ದೇವರ ದಯೆ ಏನು ಆಗಿಲ್ಲ ಎಂದು ಹೇಳಿದ್ದಾರೆ.