ಡೈಲಿ ವಾರ್ತೆ: 13/ಸೆ./2025

ಹಾಸನ | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ದುರಂತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಭೇಟಿ – ಪರಿಹಾರದ ವಿಚಾರವಾಗಿ ಸಚಿವರಿಗೆ ಜನರ ತರಾಟೆ

ಹಾಸನ: ಮೊಸಳೆ ಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಟ್ರಕ್ ಅಪಘಾತದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ದಾರೆ. ಈ ವೇಳೆ ಪರಿಹಾರದ ವಿಚಾರವಾಗಿ ಜನರು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ವಿಮಾನ ದುರಂತದಲ್ಲಿ ಸತ್ತರೆ 1 ಕೋಟಿ ರೂ. ಪರಿಹಾರ ಕೊಡ್ತೀರಿ. ಸ್ಟೇಡಿಯಂನಲ್ಲಿ ಸತ್ತರೆ 50 ಲಕ್ಷ ರೂ. ಕೊಡ್ತೀರಿ. ಬಡವರ ಮಕ್ಕಳು ಸತ್ತರೆ ಬೆಲೆ ಇಲ್ವಾ? ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಬಡವರ ಮಕ್ಕಳು ಸತ್ತಿದ್ದಾರೆ ಹೆಚ್ಚಿನ ಪರಿಹಾರ ಕೊಡಬೇಕು. 25 ಲಕ್ಷ ರೂ. ಕೊಡುವಂತೆ ಸಚಿವರಿಗೆ ಜನ ಆಗ್ರಹಿಸಿದ್ದಾರೆ.

ಕೇರಳದಲ್ಲಿ ಸತ್ತರೆ ಕರ್ನಾಟಕದಿಂದ ಪರಿಹಾರ ಕೊಡ್ತೀರಿ. ನಮ್ಮ ರೈತರ ಮಕ್ಕಳು ಸತ್ರೆ ಬಿಡಿಗಾಸು ಕೊಡ್ತೀರಿ. 5 ಲಕ್ಷ ಪರಿಹಾರ ಕೊಡೋದಾದರೆ ನೀವೇ ಇಟ್ಟುಕೊಳ್ಳಿ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಬಂಟರಹಳ್ಳಿ ಪ್ರಭಾಕರ್ ಮನೆಗೆ ಭೇಟಿ ನೀಡಿ, ಪಾರ್ಥೀವ ಶರೀರಕ್ಕೆ ನಮಸ್ಕರಿಸಿ ಸಚಿವರು ಸಾಂತ್ವನ ಹೇಳಿದ್ದಾರೆ. ಬಳಿಕ ಅಲ್ಲಿಂದ ಇನ್ನುಳಿದವರ ಮನೆಗೂ ತೆರಳಿ ಸಾಂತ್ವನ ಹೇಳಿದ್ದಾರೆ.