ಡೈಲಿ ವಾರ್ತೆ: 13/ಸೆ./2025

ಕಮಲಶಿಲೆ: ಕಡವೆ ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವು, ಸಹ ಸವಾರ ಗಂಭೀರ ಗಾಯ

ಕುಂದಾಪುರ: ಚಲಿಸುತ್ತಿದ್ದ ಬೈಕ್ ಗೆ ಕಡವೆ (ಸಾಂಬಾರ್ ಜಿಂಕೆ) ಅಡ್ಡ ಬಂದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಕಡವೆಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ಸೆ.13 ರಂದು ಶನಿವಾರ ಮಧ್ಯಾಹ್ನ ಕಮಲಶಿಲೆ ಸಮೀಪ ತಾರೆಕುಡ್ಲುನಲ್ಲಿ ಸಂಭವಿಸಿದೆ.

ಮೃತಪಟ್ಟ ಬೈಕ್ ಸವಾರ ಕಾವ್ರಡಿಯ ಶ್ರೇಯಸ್ ಮೊಗವೀರ (23) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಸಹಸವಾರ ವಿಘ್ನೇಶ್ ಎಂದು ತಿಳಿದು ಬಂದಿದೆ.
ಇವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ಸ್ನೇಹಿತರು ಇಂದು ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿಂದ ವಾಪಸು ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭ ತಾರೆಕುಡ್ಲು ಸಮೀಪ ದೊಡ್ಡ ಕಡವೆ ಯೊಂದು ಬೈಕ್ ಗೆ ಒಮ್ಮೆಲೇ ಅಡ್ಡ ಬಂದ ಪರಿಣಾಮ ಕಡವೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.

ಶಂಕರನಾರಾಯಣ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.