


ಡೈಲಿ ವಾರ್ತೆ: 17/ಸೆ./2025


ವಿಜಯಪುರ| SBI ಬ್ಯಾಂಕ್ ದರೋಡೆ: ಮ್ಯಾನೇಜರ್, ಕ್ಯಾಶಿಯರ್ ಕೈಕಾಲು ಕಟ್ಟಿ, ಕೂಡಿ ಹಾಕಿ ನಗದು ದೋಚಿ ದುಷ್ಕರ್ಮಿಗಳು ಪರಾರಿ

ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಬ್ಯಾಂಕ್ ಕಳ್ಳತನ ಪ್ರಕರಣ ವರದಿಯಾಗಿದೆ. ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಈ ದರೋಡೆ ನಡೆದಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ಮುಖಕ್ಕೆ ಮುಸುಕು ಹಾಕಿಕೊಂಡು ಹಾಗೂ ಮಿಲಿಟರಿ ಮಾದರಿ ಬಟ್ಟೆ ಹಾಕಿಕೊಂಡು ಬಂದ ದರೋಡೆಕೋರರು ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರ ಸಿಬ್ಬಂದಿಗಳ ಕೈಕಾಲು ಕಟ್ಟಿ ಕೂಡಿ ಹಾಕಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆಕೋರರು ಕಂಟ್ರಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬ್ಯಾಂಕ್ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದು, ಬ್ಯಾಂಕ್ ನಲ್ಲಿದ್ದ ಅಂದಾಜು 8 ಕೋಟಿ ನಗದು 50ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ದರೋಡೆಕೋರರ ಗ್ಯಾಂಗ್ ಬ್ಯಾಂಕ್ನಿಂದ ಎಷ್ಟು ನಗದು, ಚಿನ್ನದ ಆಭರಣಗಳನ್ನು ದರೋಡೆ ಮಾಡಿದ್ದಾರೆ ಎಂಬ
ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಶ್ವಾನದಳ, ಬೆರಳಚ್ಚುದಳ ಸಿಬ್ಬಂದಿ ಆಗಮಿಸಿ ಪರೀಕ್ಷೆ ನಡೆಸಿದ್ದಾರೆ. ಬ್ಯಾಂಕ್ ನಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸುದ್ದಿ ತಿಳಿದು ಬ್ಯಾಂಕ್ ಎದುರಿಗೆ ಸ್ಥಳೀಯರು ಜಮಾಯಿಸಿದ್ದಾರೆ ಎಂದು ತಿಳಿದು ಬಂದಿದೆ.