ಡೈಲಿ ವಾರ್ತೆ: 22/ಸೆ./2025

ಬಂಟ್ವಾಳ| ಅಕ್ರಮ ಕಸಾಯಿಖಾನೆ ಅಡ್ಡೆಗೆ ಪೊಲೀಸರಿಂದ ದಾಳಿ – ಓರ್ವನ ಬಂಧನ, 9 ಹಸುಗಳ ರಕ್ಷಣೆ, ಒಂದು ದನದ ತಲೆ, ಮಾಂಸ, ಆಟೋ ರಿಕ್ಷಾ ವಶಕ್ಕೆ

ಬಂಟ್ವಾಳ : ಅಕ್ರಮ ಜಾನುವಾರು ವಧಾ ಕೇಂದ್ರಕ್ಕೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು 9 ಜಾನುವಾರು, ವಧೆ ಮಾಡಿದ ಹಸುವಿನ ಮಾಂಸ, ಕೃತ್ಯಕ್ಕೆ ಬಳಸಿದ ಅಟೋ ರಿಕ್ಷಾ ಸಹಿತ ಓರ್ವನನ್ನು ಬಂಧಿಸಿದ ಘಟನೆ ಸಂಗಬೆಟ್ಟು ಗ್ರಾಮದ ಕೆರೆಬಳಿ ಎಂಬಲ್ಲಿ ಭಾನುವಾರ ನಡೆದಿದೆ.

ಸಂಗಬೆಟ್ಟು ಗ್ರಾಮದ ಕೆರೆಬಳಿ ನಾಸಿರ್ ಮತ್ತು ಇತರರು ದನವನ್ನು ತಂದು ವಧೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಪೊಲೀಸರು ಈ ದಾಳಿ ನಡೆಸಿದ್ದು ಕೆರೆಬಳಿ ನಿವಾಸಿ ಇದಿನಬ್ಬ ಎಂಬವರ ವಾಸದ ಮನೆಯ ಹಿಂಭಾಗದಲ್ಲಿರುವ ಶೆಡ್ಡಿನಲ್ಲಿ ನಾಸಿರ್ ಅಲಿಯಾಸ್ ಹುಸೇನಬ್ಬ ಸಂಗಬೆಟ್ಟು, ರಶೀದ್ ಮತ್ತು ಇತರರು ದನವನ್ನು ವಧೆ ಮಾಡಿ ಹಾಕಿದ್ದನ್ನು ಕಂಡು ಪೊಲೀಸರು ಸುತ್ತುವರೆದಾಗ ನಾಸಿರ್ ಮತ್ತು ಇತರರು ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ ತೌಸೀಫ್ ಮುಲ್ಕಿ ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.

ಈತನನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಸುಮಾರು 6 ವರ್ಷ ಪ್ರಾಯದ ಒಂದು ಹಸುವನ್ನು ವಧೆ ಮಾಡಿ ಹಾಕಿದ್ದಲ್ಲದೆ ವದೆ ಮಾಡಲು ತಂದು ಕಟ್ಟಿ ಹಾಕಿರುವ 9 ದನಗಳನ್ನು ಪೊಲೀಸರು ರಕ್ಷಿಸಿ ವಶಕ್ಕೆ ಪಡೆದು ಗೋಶಾಲೆಗೆ ಹಂಸ್ತಾರಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ಸ್ವಾಧಿನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿ ತೌಸೀಫ್ ಮುಲ್ಕಿ ಎಂಬಾತನನ್ನು ಬಂಟ್ವಾಳ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.