ಡೈಲಿ ವಾರ್ತೆ: 25/ಸೆ./2025

ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಗಫೂರ್, ನಾರಾಯಣ ಗುರು ಪ್ರಾಧಿಕಾರಕ್ಕೆ ಮಂಜುನಾಥ ಪೂಜಾರಿ ನೇಮಕ ಸ್ವಾಗತಾರ್ಹ: ನವೀನ್ ಸಾಲ್ಯಾನ್

ಉಡುಪಿ:ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎಂ.ಎ. ಗಫೂರ್ ಅವರನ್ನು ನೇಮಕ ಮಾಡಿ ಕರ್ನಾಟಕ ಕಾಂಗ್ರೆಸ್ ಸರಕಾರ ಆದೇಶ ಹೊರಡಿಸಿದೆ.
ಆಸ್ಕರ್ ಫರ್ನಾಂಡಿಸ್ ಅವರ ನಿಕಟವರ್ತಿಯಾಗಿದ್ದ ಎಂ.ಎ. ಗಫೂರ್ ಅವರು ಹಲವಾರು ವರ್ಷಗಳ ಕಾಲ ಉಡುಪಿ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದೇ ವೇಳೆ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮುದ್ರಾಡಿ ಮಂಜುನಾಥ ಪೂಜಾರಿ ಇವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯದ ಗೌರವಾನ್ವಿತ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಅವರ ಅತ್ಯಂತ ಸಮೀಪದಲ್ಲಿ ಇರುವ ನಾಯಕರಲ್ಲಿ ಮಂಜುನಾಥ್ ಪೂಜಾರಿ ಹಿರಿಯರು.ಈ ಹಿಂದೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಉನ್ನತ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಿದ್ದರು.

ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದು ಸರ್ಕಾರದ ಈ ಗೌರವದ ಸ್ಥಾನವನ್ನು ಅಲಂಕರಿಸಿದ ಇಬ್ಬರು ಹಿರಿಯ ನಾಯಕರ ನೇಮಕವನ್ನು ಕಾಂಗ್ರೆಸ್ ಮುಖಂಡ ನವೀನ್ ಸಾಲ್ಯಾನ್ ಸ್ವಾಗತಿಸಿದ್ದಾರೆ.