


ಡೈಲಿ ವಾರ್ತೆ: 25/ಸೆ./2025


ನಿಗಮ ಮಂಡಳಿ ನೇಮಕಾತಿಯಲ್ಲಿ ಮೊಗವೀರ ಸಮುದಾಯದ ನಿಷ್ಠಾವಂತ ನಾಯಕ ಶಂಕರ್ ಕುಂದರ್ ಅವರ ಕಡಗಣನೆ – ಮೊಗವೀರ ಯುವಶಕ್ತಿ ಮುಖಂಡ ರಮೇಶ್ ಮೆಂಡನ್ ಸಾಲಿಗ್ರಾಮ ಆಕ್ರೋಶ

ಉಡುಪಿ: ಕರಾವಳಿಯ ಪ್ರಬಲ ಜನಾಂಗದಲ್ಲಿ ಮೊಗವೀರ ಸಮಾಜವು ಒಂದು. ಈ ನಾಡಿಗೆ ಮೊಗವೀರ ಸಮಾಜದ ಕೊಡುಗೆ ಅಪಾರ. ಆದರೆ ಇತ್ತೀಚಿನ ದಿನಗಳಲ್ಲಿ ಮೊಗವೀರ ಸಮುದಾಯಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನೀಡುವ ಸ್ಥಾನಮಾನ ಅತ್ಯಾಲ್ಪವಾಗಿದ್ದು, ಇದು ಮೊಗವೀರ ಸಮುದಾಯಕ್ಕೆ ರಾಷ್ಟೀಯ ಪಕ್ಷಗಳು ಮಾಡುವ ದ್ರೋಹವಾಗಿದೆ.
ಶಂಕರ್ ಕುಂದರ್ ಅವರು ಉಡುಪಿ ಜಿಲ್ಲೆಯಲ್ಲಿ ನಿರಂತರ 40 ವರ್ಷಕ್ಕೂ ಮೀರಿ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿರುತ್ತಾರೆ. ಒಮ್ಮೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತಿಗೆ ಆಯ್ಕೆಗೊಂಡಿರುತ್ತಾರೆ.
ಕಳೆದ ಹದಿಮೂರು ವರ್ಷದಿಂದ ಕೋಟ ಬ್ಲಾಕ್ ಕಾಂಗ್ರೆಸ್ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅಧ್ಯಕ್ಷ ಅವಧಿಯಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ತನ್ನ ಸ್ವಂತ ಕಟ್ಟಡ ಹೊಂದಲು ಶಂಕರ್ ಕುಂದರ್ ಶ್ರಮ ಅಪಾರವಾಗಿದೆ. ಎರಡು ಬಾರಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಯಸಿ, ಕೆಪಿಸಿಸಿ ಆದೇಶದಂತೆ ಎರಡು ಲಕ್ಷ ರೂಪಾಯಿ ಠೇವಣಿ ಹಣ ನೀಡಿದ್ದರು. ಅಲ್ಲದೇ ಈ ಹಿಂದೆ ಪರಿಷತ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ಕೊನೆ ಕ್ಷಣದಲ್ಲಿ ಪಕ್ಷದ ನಾಯಕರ ಸೂಚನೆಗೆ ಗೌರವ ನೀಡಿ ಉಮೇದುದಾರಿಕೆ ಹಿಂಪಡೆದು ಪಕ್ಷ ಸೂಚಿಸಿದ ಅಭ್ಯರ್ಥಿ ಗೆಲುವಿಗೆ ಹೋರಾಟ ನೀಡಿದ್ದರು.
ಇದೀಗ ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕಾತಿ ಆದೇಶ ಜಾರಿಯಾಗಿದೆ. ಶಂಕರ್ ಕುಂದರ್ ಇವರಿಗೆ ಯಾವುದೇ ಹುದ್ದೆ ನೀಡದೆ ಇರುವುದು ಸಮಸ್ತ ಮೊಗವೀರ ಸಮಾಜಕ್ಕೆ ಮಾಡಿದ ದ್ರೋಹವಾಗಿದೆ ಎಂದು ಮೊಗವೀರ ಯುವಶಕ್ತಿ ಮುಖಂಡರಾದ ರಮೇಶ್ ಮೆಂಡನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.