


ಡೈಲಿ ವಾರ್ತೆ: 26/ಸೆ./2025


ಪಡುಬಿದ್ರಿ: ಟಿಪ್ಪರ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ, ಪಾದಚಾರಿ ಮೃತ್ಯು

ಪಡುಬಿದ್ರಿ: ಟಿಪ್ಪರ್ ಚಾಲಕನ ಅತೀ ವೇಗದ ಚಾಲನೆಯಿಂದಾಗಿ ನಡೆದ ಅಪಘಾತಕ್ಕೆ ಬಿಹಾರ ಮೂಲದ ನವ ವಿವಾಹಿತನೋರ್ವ ದಾರುಣಾವಾಗಿ ಮೃತಪಟ್ಟ ಘಟನೆ ಪಡುಬಿದ್ರಿ ಕಾಮತ್ ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದೆ.
ಮೃತ ಯುವಕ ಬಿಹಾರ ಮೂಲದ, ಎರ್ಮಾಳಿನ ಪ್ರೈವುಡ್ ಫ್ಯಾಕ್ಟರಿ ಉದ್ಯೋಗಿ ರಾಜಕುಮಾರ ಶರ್ಮ(23) ಎಂದು ಗುರುತಿಸಲಾಗಿದೆ. ಇವರಿಗೆ ಆರು ತಿಂಗಳ ಹಿಂದೆಯಷ್ಟೇ ಇವರಿಗೆ ಮದುವೆಯಾಗಿತ್ತು. ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಪಡುಬಿದ್ರಿ ಪೇಟೆ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ ಪಿಕಪ್ ಗೂಡ್ಸ್ ವಾಹನ ಯಾವುದೋ ಕಾರಣಕ್ಕೆ ಹೆದ್ದಾರಿಯಲ್ಲಿ ನಿಂತಿದ್ದು, ಆ ಕ್ಷಣ ಅದರ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್, ಪಿಕಪ್ ವಾಹನದ ಹಿಂಭಾಗಕ್ಕೆ ಬಂದ ವೇಗದಲ್ಲೇ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರ ಪೈಕಿ ಓರ್ವನಿಗೆ ಡಿಕ್ಕಿ ಹೊಡೆದು ಪಕ್ಕದ ಕಟ್ಟಡದ ಗೋಡೆಗೆ ಡಿಕ್ಕಿಯಾಗಿ ನಿಂತಿದೆ. ಡಿಕ್ಕಿಯ ರಭಸಕ್ಕೆ ಕಟ್ಟಡದ ಗೋಡೆಯೂ ಕುಸಿದು ಬಿದ್ದಿದೆ. ಅಪಘಾತದಿಂದ ರಾಜಕುಮಾರ ಶರ್ಮ ತಲೆಗೆ ಗಂಭೀರ ಹೊಡೆತ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿತ್ತು.
ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಪರಿಶೀಲನೆ ನಡೆಸಿದ್ದು, ಟಿಪ್ಪರ್ ಚಾಲಕನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.