ಡೈಲಿ ವಾರ್ತೆ: 26/ಸೆ./2025

ʼಯುವ ದಸರಾ’ದಲ್ಲಿ ಕುಂದಾಪುರ ಸುಜ್ಞಾನ ಪಿಯು ವಿದ್ಯಾರ್ಥಿಗಳ ನೃತ್ಯರೂಪಕದ ಮೆರುಗು!

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿರುವ ಪ್ರತಿಷ್ಠಿತ ‘ಯುವ ದಸರಾ’ ವೇದಿಕೆಯಲ್ಲಿ ಕುಂದಾಪುರದ ಸುಜ್ಞಾನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ‘ಪರಿಸರ ಸಂರಕ್ಷಣೆ’ ವಿಷಯ ಆಧರಿಸಿ ನೃತ್ಯಪ್ರದರ್ಶನ ನೀಡಿ ನೆರೆದಿದ್ದ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಈ ಸ್ಪರ್ಧೆಗೆ ರಾಜ್ಯದ ವಿವಿಧೆಡೆಯ ಒಟ್ಟು 700 ಕಾಲೇಜುಗಳು ಭಾಗವಹಿಸಿದ್ದವು. ಅತ್ಯುತ್ತಮ ಪ್ರದರ್ಶನಕ್ಕಾಗಿ ಕೇವಲ 8 ಕಾಲೇಜುಗಳು ಆಯ್ಕೆಯಾಗಿದ್ದವು. ಅದರಲ್ಲಿ ಸುಜ್ಞಾನ ಪಿಯು ಕಾಲೇಜು ಕೂಡ ಒಂದಾಗಿರುವುದು ಕಾಲೇಜಿಗೆ ಮತ್ತು ಕುಂದಾಪುರಕ್ಕೆ ಹೆಮ್ಮೆಯ ವಿಷಯವಾಗಿದೆ.

ಸುಜ್ಞಾನ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೆಪ್ಟೆಂಬರ್ 14ರಂದು ಯುವ ಸಂಭ್ರಮದಲ್ಲಿ ಮೊದಲು ನೃತ್ಯ ಪ್ರದರ್ಶನ ನೀಡಿದ್ದರು.ಈ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿ, ಆಯ್ಕೆಯಾದ ನಂತರ ಸೆಪ್ಟೆಂಬರ್ 24ರಂದು ಯುವ ದಸರದ ಮುಖ್ಯ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದರು.

ಈ ನೃತ್ಯ ಪ್ರದರ್ಶನಕ್ಕೆ Zee ಕನ್ನಡ ವಾಹಿನಿಯ ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼನ ರವಿ ಮಾಸ್ಟರ್ ಪರಿಕಲ್ಪನೆ ನೀಡಿದ್ದು, ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼನ ರೋಶನ್ ಮಾಸ್ಟರ್ ಸಹಕಾರ ನೀಡಿದರು. ಸಂಸ್ಥೆಯ ಶಿಕ್ಷಕಿ ಶ್ರೀಮತಿ ಸುಜನ ವಿದ್ಯಾರ್ಥಿಗಳ ಸಂಯೋಜಕಿ ಹಾಗೂ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು.ಒಟ್ಟು 27 ಹುಡುಗಿಯರು ಮತ್ತು 13 ಹುಡುಗರನ್ನು ಒಳಗೊಂಡ 40 ವಿದ್ಯಾರ್ಥಿಗಳ ತಂಡವು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದಿತ್ತು.

ರಾಜ್ಯದ ಪ್ರಮುಖ ಸಾಂಸ್ಕೃತಿಕ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮವಾಗಿ ನೃತ್ಯ ಪ್ರದರ್ಶಿಸಿ ಅಪಾರ ಸಂಖ್ಯೆಯ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.