


ಡೈಲಿ ವಾರ್ತೆ: 26/ಸೆ./2025


4 ವರ್ಷದ ಬಾಲಕ ಚರಂಡಿಗೆ ಬಿದ್ದು ಮೃತ್ಯು – ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಬಳ್ಳಾರಿ: ಚರಂಡಿ ಗುಂಡಿಗೆ ಬಿದ್ದು ಬಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ನಡೆದಿದೆ.
ಕುರೇಕುಪ್ಪದ 6ನೇ ವಾರ್ಡ್‌ನ ಪಿ ಅರವಿಂದ್ (4) ಮೃತ ಬಾಲಕ.
ಸಂಜೆ ಆಟವಾಡುತ್ತಾ ತಾತನ ಮನೆಗೆ ಹೊರಟಿದ್ದ ಬಾಲಕ, ಕಾಲು ಜಾರಿ ಚರಂಡಿ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಡಿದ್ದಾರೆ. ತಡರಾತ್ರಿ ಚರಂಡಿ ನೀರಿನಲ್ಲಿ ಬಾಲಕನ ಮೃತದೇಹ ತೇಲಿದೆ. ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನ ಜಿಂದಾಲ್ ಆಸ್ಪತ್ರೆಗೆ ಪೋಷಕರು ದಾಖಲಿಸಿದರು. ನೀರಿನಲ್ಲೇ ಮಗು ಮೃತಪಟ್ಟಿದ್ದ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಕೊನೇ ಕ್ಷಣದಲ್ಲಿ ಮಗು ಚರಂಡಿ ನೀರಿನಲ್ಲಿ ಬಿದ್ದು ಒದ್ದಾಡುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ಮಗು ಸಾವಿಗೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.