ಡೈಲಿ ವಾರ್ತೆ: 02/ಅ./2025

ಕೋಟ| ಮೀನುಗಾರಿಕೆ ಸಂದರ್ಭ ಮೃತಪಟ್ಟ ಮೀನುಗಾರನ‌ ಕುಟುಂಬಕ್ಕೆ ಸಚಿವರಿಂದ ಪರಿಹಾರ ವಿತರಣೆ

ಕೋಟ: ಮೀನುಗಾರಿಕೆ ತೆರಳಿದ್ದ ಸಂದರ್ಭ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಮೃತಪಟ್ಟ ಕೋಟ ಕೋಡಿ ಹೊಸಬೆಂಗ್ರೆಯ ನಿವಾಸಿ ಶರತ್ ಕುಟುಂಬಕ್ಕೆ ಮೀನುಗಾರಿಕೆ ಸಚಿವ ಮಾಂಕಲ್ ವೈಧ್ಯ ಹತ್ತು ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದರು.

ಕೋಡಿ ಹೊಸಬೆಂಗ್ರೆಯ ಲಕ್ಷ್ಮಣ ಖಾರ್ವಿ ಹಾಗೂ ಶಾಂತಿ ಖಾರ್ವಿಯವರ ಪುತ್ರ ಶರತ್ ಖಾರ್ವಿ ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ದೋಣಿ ಮಗುಚಿ ದೋಣಿಯ ಅಡಿ ಭಾಗಕ್ಕೆ ಸಿಕ್ಕಿ ಮೃತಪಟ್ಟಿದ್ದರು.
ಈ ಸಂದರ್ಭ ಮೀನುಗಾರಿಕೆ ಸಚಿವರು ಮೃತನ ಕುಟುಂಬಕ್ಕೆ ಸಾಂತ್ವಾನ ತಿಳಿಸಿದರು ಹಾಗೂ ಮೀನುಗಾರರ ಜತೆ ಸರಕಾರ ಇದೆ ಎಂದರು. ಹೆಚ್ಚುವರಿ ಐದು ಲಕ್ಷ ರೂ ಪರಿಹಾರಕ್ಕಾಗಿ ಮೀನುಗಾರಿಕೆ ಇಲಾಖೆ ಕಡತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು‌ ಶಾಸಕ ಕಿರಣ್ ಕೊಡ್ಗಿ ತಿಳಿಸಿದರು. ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮೀನುಗಾರರ ಸಮಸ್ಯೆಯ ಬಗ್ಗೆ ಸಚಿವರಿಗೆ ವಿವರಿಸಿದರು.
ಸ್ಥಳೀಯ ಪ್ರಮುಖರಾದ ಶಂಕರ ಬಂಗೇರ ಅವರು ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದರು. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.